ಸಾಂದರ್ಭಿಕ ಚಿತ್ರ 
ಜಿಲ್ಲೆ

ಟೋ ಮಾಡಿದ ವಾಹನ ಬಿಡಲು ಲಂಚ ಕೇಳಿದ ಪೊಲೀಸ್; ದೂರಿನ ಮೇರೆಗೆ ಠಾಣೆ ಮೇಲೆ ದಾಳಿ ಮಾಡಿದ ಎಸಿಬಿ

ಬೆಂಗಳೂರು: ರಾಜಧಾನಿಯ ಸಂಚಾರ ಪೊಲೀಸರ ಟೋಯಿಂಗ್ ಕಾರ್ಯವೈಖರಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಟೀಕೆ ಹಾಗೂ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಗುರಿಯಾಗುತ್ತಿರುವುದರ ಬೆನ್ನಿಗೇ ಮತ್ತೆ ಅಂಥದ್ದೊಂದು ಪ್ರಕರಣ ವರದಿಯಾಗಿದೆ. ಜಯನಗರ ಸಂಚಾರ ಠಾಣೆ ಪೊಲೀಸರು ವಾಹನ ಟೋ ಮಾಡಿದ್ದಲ್ಲದೆ, ಅದನ್ನು ಬಿಟ್ಟು ಕೊಡಲು ಲಂಚಕ್ಕೆ ಕೈಯೊಡ್ಡಿ ಸ್ವತಃ ಮುಜುಗರಕ್ಕೆ ಒಳಗಾಗುವಂಥ ಪರಿಸ್ಥಿತಿ ತಂದುಕೊಂಡಿದ್ದಾರೆ.

ಮಲ್ಲೇಶ್ವರ ನಿವಾಸಿಯೊಬ್ಬರು ಜೆ.ಪಿ. ನಗರದ ಶಾಂತಿ ಸಾಗರ ಹೋಟೆಲ್​ ಮುಂಭಾಗ ಬೈಕ್ ನಿಲ್ಲಿಸಿದ್ದರು. ಈ ವೇಳೆ ಆಗಮಿಸಿದ್ದ ಟೋಯಿಂಗ್​ನವರು ಆ ಬೈಕ್​ ಟೋ ಮಾಡಿಕೊಂಡು ಹೋಗಿದ್ದರು. ಬಳಿಕ ಆ ವಾಹನದ ವಾರಸುದಾರ ಠಾಣೆಗೆ ಹೋಗಿ ವಿಚಾರಿಸಿದಾಗ ಟೋಯಿಂಗ್ ಸರ್ಕಾರಿ ಶುಲ್ಕ 1,150 ರೂ. ಇರುವುದು ತಿಳಿದು ಬಂದಿತ್ತು. ಆದರೆ 800 ರೂ. ಕೊಟ್ಟರೆ ಬಿಟ್ಟುಬಿಡುವುದಾಗಿ ಪೊಲೀಸರು ಆಮಿಷವೊಡ್ಡಿದ್ದರು.

ಮಲ್ಲೇಶ್ವರದ ಆ ನಿವಾಸಿ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅದರಂತೆ ಎಸಿಬಿ ಅಧಿಕಾರಿಗಳು ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಮಾತ್ರವಲ್ಲ ಲಂಚ ಪಡೆಯುತ್ತಿದ್ದ ಟೋಯಿಂಗ್ ಸಿಬ್ಬಂದಿ ಸಿದ್ದೇಗೌಡ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಯ ಇನ್​ಸ್ಪೆಕ್ಟರ್​, ಸಬ್​ ಇನ್​ಸ್ಪೆಕ್ಟರ್ ಹಾಗೂ ಇತರ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.