ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಕಾಯುತ್ತಿರುವ ಆಧಾರ್ ಸೇವಾಕಾಂಕ್ಷಿಗಳು. 
ಜಿಲ್ಲೆ

ಆಧಾರ್ ಸೇವೆ ಸಿಗದೆ ಸಂಕಷ್ಟ : ಉಪ್ಪಿನಂಗಡಿಯಲ್ಲಿ ಸಾಲುಗಟ್ಟಿ ನಿಲ್ಲುವ ಜನ

ಸೌಮ್ಯ ಆರ್

ಉಪ್ಪಿನಂಗಡಿ: ಇಲ್ಲಿನ ಅಂಚೆ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿರುವುದರಿಂದ ಜನತೆ ಬಿಎಸ್‌ಎನ್‌ಎಲ್ ಕಚೇರಿ ಮುಂಭಾ ಕಾಯುವಂತಾಗಿದೆ.

ಈ ಮೊದಲು ಉಪ್ಪಿನಂಗಡಿಯ ಅಂಚೆ ಕಚೇರಿಯಲ್ಲಿ ವ್ಯವಸ್ಥಿತವಾಗಿ ಆಧಾರ್ ಸೇವೆ ಲಭಿಸುತ್ತಿತ್ತು. ಅಲ್ಲಿನ ಆಧಾರ್ ಸೇವೆ ನೀಡುವ ಸಿಬ್ಬಂದಿಗೆ ಬಡ್ತಿಯಾಗಿ ವರ್ಗಾವಣೆಯಾದ ದಿನದಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ. ನಾಡಕಚೇರಿಯಲ್ಲಿ ಯಾವಾಗ ಸೇವೆ ದೊರೆಯುತ್ತದೆ ಎನ್ನುವುದೇ ತಿಳಿಯದಾಗಿದೆ.

ಈ ಮಧ್ಯೆ ಉಪ್ಪಿನಂಗಡಿಯ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಆಧಾರ್ ಸೇವೆ ನೀಡಲಾಗುತ್ತಿದೆಯಾದರೂ, ಅಲ್ಲಿ ಹತ್ತು ಗಂಟೆಯ ಬಳಿಕ ಕಚೇರಿ ತೆರೆಯುವುದು, ಹೆಚ್ಚುವರಿ ಸೇವಾಶುಲ್ಕ ಸ್ವೀಕರಿಸಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಎಲ್ಲೂ ಸೇವೆ ದೊರೆಯದೆ ಇದ್ದಾಗ ಜನ ಈ ಕೇಂದ್ರಕ್ಕೆ ಹೋಗುವುದು ಅನಿವಾರ್ಯವೆನಿಸಿದೆ. ಹೀಗಾಗಿ ಮುಂಜಾನೆ 8 ಗಂಟೆಗೆ ಬಂದು ಜನ ಕ್ಯೂ ನಿಲ್ಲುತ್ತಾರೆ.

ಉಪ್ಪಿನಂಗಡಿ ಅಂಚೆ ಕಚೇರಿಯಲ್ಲಿ ಈ ಹಿಂದೆ ಮುಂಜಾನೆ 8 ಗಂಟೆಯಿಂದಲೇ ಆಧಾರ್ ಸೇವೆ ದೊರಕುತ್ತಿದ್ದು, ಇದೀಗ ಸಿಬ್ಬಂದಿ ಕೊರತೆ ಕಾರಣಕ್ಕೆ ಸೇವೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಅಗತ್ಯ ಸಿಬ್ಬಂದಿ ನೇಮಿಸಿ ಜನತೆಗೆ ಆಧಾರ್ ಸೇವೆಯನ್ನು ನಿರಂತರ ಒದಗಿಸುವತ್ತ ಅಂಚೆ ಇಲಾಖಾಧಿಕಾರಿಗಳು ಗಮನಹರಿಸಬೇಕು. ಇಲ್ಲವಾದರೆ ಪ್ರತಿಭಟನೆಯಂತಹ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಉಪ್ಪಿನಂಗಡಿಯ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ ಎಚ್ಚರಿಸಿದ್ದಾರೆ.