ಬೆಂಗಳೂರು: ಇಲ್ಲೊಬ್ಬ ಪಾಪಿ ಪತ್ನಿ ಇದ್ದರೂ ನಾದಿನಿಯನ್ನ ಮದುವೆ ಆಗುವ ದುರಾಸೆಯಲ್ಲಿ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ.
ಕೊಡಿಗೇಹಳ್ಳಿ ನಿವಾಸಿ 32 ವರ್ಷ ದೇವರಾಜ್ಗೆ ನಾಲ್ಕು ವರ್ಷದ ಹಿಂದೆಯೇ ಮದುವೆ ಆಗಿದೆ. ನಗರದಲ್ಲಿ ಕೋಳಿ ವ್ಯಾಪಾರ ಮಾಡಿಕೊಂಡಿದ್ದ ದೇವರಾಜ್, ತನ್ನ ಪತ್ನಿಯ ತಂಗಿ ಮಮತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅಕ್ಕನ ಗಂಡನ ಮೇಲೆ ನಾದಿನಿಯೂ ಆಕರ್ಷಿತಳಾಗಿದ್ದಳು. ಪತ್ನಿಗೆ ಕಿರುಕುಳ ಕೊಡುತ್ತಿದ್ದ ದೇವರಾಜ್, ನಿನ್ನ ತಂಗಿಯನ್ನು 2ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದ. ಈ ವಿಚಾರ ಮನೆಯವರ ಗಮನಕ್ಕೆ ಬಂದು ಮಮತಾಗೆ ಬುದ್ಧಿಮಾತು ಹೇಳಿದ್ದರು. ನಂತರ ದೇವರಾಜ್ ಜತೆ ಮಮತಾ ಅಂತರ ಕಾಯ್ದುಕೊಂಡಿದ್ದಳು. 3 ತಿಂಗಳಿನಿಂದ ಸಹಕಾರನಗರದ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ಮಾಲ್ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ದೇವರಾಜ್ ಆಕೆಯನ್ನು ವಿವಾಹವಾಗಲು ಹಂಬಲಿಸುತ್ತಿದ್ದ.
ಅದಕ್ಕಾಗಿ ತನ್ನ ಸಹಚರರಾದ ಕುಮಾರ್ ಮತ್ತು ನವೀನ್ ಜತೆ ಸೇರಿ ಆಕೆಯನ್ನು ಅಪಹರಿಸಿ ವಿವಾಹವಾಗಲು ಸಂಚು ರೂಪಿಸಿದ್ದ. ಜ.22ರಂದು ರಾತ್ರಿ 10.30ರಲ್ಲಿ ಮಮತಾ ಕೆಲಸ ಮುಗಿಸಿಕೊಂಡು ಸಹಪಾಠಿ ಅಭಿಷೇಕ್ ಜತೆ ಸ್ಕೂಟರ್ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಮಾರ್ಗಮಧ್ಯೆ ಕೊಡಿಗೇಹಳ್ಳಿಯ ಅಪಾರ್ಟ್ಮೆಂಟ್ವೊಂದರ ಮುಂಭಾಗ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದರು. ಅಭಿಷೇಕ್ ಪ್ರತಿರೋಧ ತೋರಿದಾಗ ಕುಮಾರ್ ಮತ್ತು ನವೀನ್ ಆತನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಬಗ್ಗೆ ಮಮತಾಳ ತಂದೆ ಮುನಿಸ್ವಾಮಿಗೆ ಅಭಿಷೇಕ್ ವಿವರಿಸಿದ್ದ. ಮುನಿಸ್ವಾಮಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಆಸುಪಾಸಿನಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ, ಮಮತಾಳನ್ನು ದೇವರಾಜ್ ಅಪಹರಿಸುವ ದೃಶ್ಯ ಕಂಡು ಬಂದಿತ್ತು. ಕೂಡಲೇ ಟವರ್ ಲೊಕೇಶನ್ ಮೂಲಕ ದೇವರಾಜ್ ಮೊಬೈಲ್ ಕಾರ್ಯ ನಿರ್ವಹಿಸುವ ಪ್ರದೇಶವನ್ನು ಪರಿಶೀಲಿಸಿದಾಗ ಆತ ಅರಸೀಕೆರೆಯಲ್ಲಿರುವ ಸುಳಿವು ಸಿಕ್ಕಿತ್ತು. ಸೋಮವಾರ ಬೆಳಗ್ಗೆ ಅರಿಸೀಕೆರೆಗೆ ತೆರಳಿದ ಪೊಲೀಸರ ತಂಡ ದೇವರಾಜ್ ಹಾಗೂ ಈತನ ಸಹಚರರಾದ ಕುಮಾರ್ (33) ಹಾಗೂ ನವೀನ್ (31) ಸೇರಿ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಮತಾಳನ್ನು ರಕ್ಷಣೆ ಮಾಡಿ ಆಕೆಯ ಪಾಲಕರಿಗೆ ಒಪ್ಪಿಸಿದ್ದಾರೆ.