ಜಿಲ್ಲೆ

ಕೊಪ್ಪಳ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ: ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ

ಕೊಪ್ಪಳ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗುರುವಾರ ಬೆಳಗ್ಗೆ ಮಾರಾಮಾರಿ ನಡೆದಿದ್ದು, ಇಬ್ಬರು ಕೊಲೆಯಾಗಿದ್ದಾರೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಯಕಪ್ಪ ತಳವಾರ (60) ಮತ್ತು ಬಾಷಾಸಾಬ(22) ಮೃತ ದುರ್ದೈವಿಗಳು. ಧರ್ಮಣ್ಣ ಹರಿಜನ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ‌ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಗಿದೆ. 4 ಜಿಲ್ಲಾ ಶಶಸ್ತ್ರ ಮೀಸಲು ಪಡೆ, ಡಿವೈಎಸ್ಪಿ ಸಹಿತ ಪೊಲೀಸ್ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ.

ಘಟನೆ ಸಂಬಂಧ ಕೆಲ ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಖಂಡಿಸಿ ಸಮುದಾಯದ ಜನರು ಪೊಲೀಸರ ವಿರುದ್ಧವೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗ್ರಾಮದ ಸುತ್ತ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.