ಕುಂದಾಪುರದಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಲು ಹಾಡಹಗಲೇ ಬಂದು ಸಿಕ್ಕಿಬಿದ್ದ ದಂಪತಿಯ ಮದ್ವೆ ರಹಸ್ಯ ಬಯಲು!

maravante temple
Published on

ಕುಂದಾಪುರ(ಉಡುಪಿ): ಮರವಂತೆ ಮಹಾರಾಜ ವರಾಹಸ್ವಾಮಿ ದೇವಸ್ಥಾನದಲ್ಲಿ ಹಾಡಹಗಲೇ ಕಳವು ಮಾಡಲು ಬಂದ ದಂಪತಿ ಪೈಕಿ ಪತಿ ಜೈಲು ಪಾಲಾದರೆ, ಪತ್ನಿ ರಿಮಾಂಡ್​ ಹೋಮ್​ ಸೇರಿದ್ದಾಳೆ.

ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿದ್ದು, ಪೂಜಾ ಕೆಲಸ ಮುಗಿಸಿ ಅರ್ಚರು ಗರ್ಭಗುಡಿಗೆ ಕದವಿಕ್ಕಿ ಮನೆಗೆ ಹೋದ ಸಂದರ್ಭದಲ್ಲಿ ಕಂಬದಕೋಣೆ ನಿವಾಸಿ ಕರುಣಾಕರ ದೇವಡಿಗ ಹಾಗೂ 17 ವರ್ಷ ಪ್ರಾಯದ ಪತ್ನಿ ದೇವಸ್ಥಾನಕ್ಕೆ ಭಕ್ತರಂತೆ ಬಂದರು. ಹೊರಗಡೆ ಇದ್ದ ದೇವರಿಗೆ ಕೈಮುಗಿದು ದೇವಸ್ಥಾನ ಪ್ರವೇಶಿಸಿ ಕಾಣಿಕೆ ಡಬ್ಬಿ ಒಡೆಯುವ ಪ್ರಯತ್ನ ಮಾಡಿ ವಿಫಲರಾದರು. ನಂತರ ಗರ್ಭಗುಡಿ ಪ್ರವೇಶಿಸಿ, ಬರಿಗೈಯಲ್ಲಿ ಮರಳಿದ್ದು, ಕಳ್ಳರ ಸಂಪೂರ್ಣ ಚಲನವಲನ ದೇವಸ್ಥಾನದ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್​ ಎಂ.ನಾಯಕ್​ ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಕರ್ಕಾಟಕ ಅಮಾವಾಸ್ಯೆ ಜಾತ್ರೆ ನಡೆದಿದ್ದು, ಕಾಣಿಕೆ ಡಬ್ಬ ತುಂಬಿರುತ್ತದೆ ಎಂದು ಬಂದ ಜೋಡಿಗೆ ನಿರಾಸೆ ಕಾದಿತ್ತು. ಕರುಣಾಕರ ದೇವಾಡಿಗ ಭದ್ರಾವತಿಯ ಅಪ್ರಾಪ್ತೆಯನ್ನು ಮದುವೆಯಾಗಿ, ಕಂಬದಕೋಣಿಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅಪ್ರಾಪ್ತೆಯನ್ನು ಮದುವೆಯಾದ ಬಗ್ಗೆಯೂ ಪ್ರಕರಣ ದಾಖಲಾಗಿದೆ.

ನಷ್ಟ ದೇವಸ್ಥಾನಕ್ಕೆ!: ದಂಪತಿ ದೇವಸ್ಥಾನಕ್ಕೆ ಕನ್ನ ಹಾಕಿ ಖಾಲಿ ಕೈಯಲ್ಲಿ ಹಿಂದಿರುಗಿದರೂ, ಕಳ್ಳರು ಗರ್ಭಗುಡಿಗೆ ನುಗ್ಗಿದ್ದರಿಂದ ಪ್ರಾಯಶ್ಚಿತ್ತಕ್ಕೆ 50-60 ಸಾವಿರ ರೂ.ಖರ್ಚು ಮಾಡಬೇಕಿದೆ. ಕಳ್ಳರು ಗರ್ಭಗುಡಿ ನುಗ್ಗಿದ್ದರಿಂದ ಶಾಂತಿ, ಶುದ್ಧಿ ವಾಸ್ತು, ರಾಕ್ಷ್ನೋ ಹೋಮ, ಚೋರ ಶಾಂತಿ ಹಾಗೂ ಗುರುವಾರ ಪುನಃ ಬ್ರಹ್ಮಕಲಶ ಮೂಲಕ ದೇವಸ್ಥಾನ ಶುದ್ಧೀಕರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net