ಮೂಲ್ಕಿ: ನಗರ ಪಂಚಾಯಿತಿಯ ವ್ಯಾಪ್ತಿಯ ಪಳ್ಳಿಗುಡ್ಡೆ ಚಡಾವು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದು ಹಾನಿಯಾಗಿದ್ದು, ಕಾರಿನಲ್ಲಿದ್ದ ಚಾಲಕ ಸಹಿತ ಮೂವರು ಪವಾಡ ಸದೃಶ ಪಾರಾಗಿದ್ದಾರೆ. ಸುರತ್ಕಲ್‌ನಿಂದ ಮುಲ್ಕಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದ ಕಾರು ಪಳ್ಳಿಗುಡ್ಡೆ ಚಡಾವು ಬಳಿ ತಲುಪುತ್ತಿದ್ದಂತೆ ಏಕಾಏಕಿ ಮರ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಸುರತ್ಕಲ್ ನಿವಾಸಿಗಳಾದ ಚಾಲಕ ಶಶಿಧರ ಪ್ರಭು, ಪ್ರಯಾಣಿಕರಾದ ವೀಣಾ ಶೆಣೈ, ಕೀರ್ತನ (ದೀಪಾಲಿ) ಪವಾಡ ಸದೃಶ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ ಘಟನೆಯಿಂದ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯ ಉಂಟಾಗಿದ್ದು ಕೂಡಲೇ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಾಲಚಂದ್ರ ಕಾಮತ್, ಕಾರು ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮೂಲ್ಕಿ ಪೊಲೀಸರು ಹಾಗೂ ನಗರ ಪಂಚಾಯಿತಿ ಸಿಬ್ಬಂದಿ ಮರ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು. ಜಖಂಗೊಂಡ ಕಾರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ. ಈ ಭಾಗದಲ್ಲಿ ಅನೇಕ ಅಪಾಯಕಾರಿ ಮರಗಳಿದ್ದು ಮಳೆಗಾಲದಲ್ಲಿ ಅಪಾಯ ಸಂಭವಿಸುವ ಮೊದಲೇ ಮರಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರಾದ ಸಂದೀಪ್ ಶಿಮಂತೂರು ಒತ್ತಾಯಿಸಿದ್ದಾರೆ.