

ಮನೋಹರ್ ಬಳಂಜ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನದಿಗಳು ತುಂಬಿ ಹರಿದ ಪರಿಣಾಮ ಮರಮಟ್ಟು ಮತ್ತು ತ್ಯಾಜ್ಯ ತುಂಬಿಕೊಂಡಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ.
ಈ ಬಾರಿ ಮೇ ತಿಂಗಳು ಮುಗಿಯುವ ಮೊದಲೇ ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಕಪಿಲಾ, ಫಲ್ಗುಣಿ, ಸೋಮಾವತಿ ನದಿಗಳು, ನೆರಿಯ, ಅಣಿಯೂರು ಹೊಳೆಗಳು ಸೇರಿದಂತೆ ತಾಲೂಕಿನ ಹಳ್ಳ- ತೋಡುಗಳು ತುಂಬಿ ಹರಿದಿದ್ದು, ಕೆಲವೆಡೆ ಸಾಮಾನ್ಯ ಪ್ರವಾಹ ಸ್ಥಿತಿಯೂ ಕಂಡುಬಂದಿದೆ. ನದಿಗಳಲ್ಲಿ ಹೆಚ್ಚಿನ ನೀರು ಬಂದಾಗ ಇದರೊಂದಿಗೆ ತೇಲಿ ಬಂದ ಮರಮಟ್ಟು, ತ್ಯಾಜ್ಯ ಕಿಂಡಿ ಅಣೆಕಟ್ಟುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಂಬಿಕೊಂಡಿವೆ. ಇಷ್ಟೊಂದು ಪ್ರಮಾಣದ ಮರಮಟ್ಟು ತುಂಬಿಕೊಂಡಿರುವುದರಿಂದ ಸಮೀಪದ ತೋಟಗಳಲ್ಲೂ ಕೃತಕ ನೆರೆ ಕಂಡುಬಂದಿದೆ.
ಜೂನ್ ಆರಂಭಕ್ಕೆ ಮೊದಲೇ ಈ ರೀತಿ ಮರಮಟ್ಟು ತುಂಬಿಕೊಂಡಿದ್ದು, ಇದನ್ನು ತೆರವುಗೊಳಿಸದಿದ್ದರೆ ಮುಂದೆ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕಿಂಡಿ ಅಣೆಕಟ್ಟುಗಳಿಗೆ ಬಂದು ಬಡಿಯುವ ಮರಮಟ್ಟು ಅವುಗಳು ಶಿಥಿಲಾವಸ್ಥೆ ತಲುಪಲು ಕಾರಣವಾಗುತ್ತವೆ.
ಹಲಗೆ ತೆರವು ಕೆಲಸ ಬಾಕಿ
ಕೆಲವೊಂದು ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಕೆಲಸ ಬಾಕಿ ಇದ್ದು, ಈಗ ಇವುಗಳಲ್ಲಿ ಮರಮಟ್ಟು ತುಂಬಿರುವುದರಿಂದ ಹಲಗೆ ತೆರವು ಕಾರ್ಯಕ್ಕೆ ಇನ್ನಷ್ಟು ಅಡ್ಡಿ ಉಂಟಾಗಿದೆ. ನದಿ, ಹೊಳೆಗಳು ತುಂಬಿ ಹರಿಯುತ್ತಿದ್ದು, ಕಿಂಡಿ ಅಣೆಕಟ್ಟುಗಳ ಮೇಲ್ಭಾಗದಲ್ಲಿ ಹಲವು ಅಡಿ ನೀರು ಇದ್ದು, ಅಣೆಕಟ್ಟುಗಳ ಹಲಗೆ ತೆರವಿಗೆ ವಿಳಂಬವಾಗುತ್ತಿದೆ. ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳ್ಳದಿದ್ದರೆ ಮಳೆಗಾಲದಲ್ಲಿ ನದಿ, ಹೊಳೆಗಳು ತುಂಬಿ ಹರಿದಾಗ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಲಿದೆ. ನದಿಗಳ ನೀರು ತಗ್ಗಿದ ತಕ್ಷಣ ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ತೆರೆವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದು ಬೆಳ್ತಂಗಡಿ ತಹಸೀಲ್ದಾರ್ ಪಥ್ವಿ ಸಾನಿಕಂ ತಿಳಿಸಿದ್ದಾರೆ.
ಹೊಂಡ ನಿರ್ಮಾಣ
ನಿಡಿಗಲ್ ಕಿಂಡಿ ಅಣೆಕಟ್ಟಿನಲ್ಲಿ ಮರಮಟ್ಟು ಸಿಲುಕಿಕೊಂಡ ಪರಿಣಾಮ ನದಿ ನೀರು ಕಿಂಡಿ ಅಣೆಕಟ್ಟಿನ ತಡೆಗೋಡೆ ಬದಿಯಲ್ಲಿ ಹರಿದು ಹೋಗಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ತಡೆಗೋಡೆ ಬದಿಯಲ್ಲಿ 8 ಅಡಿ ಅಗಲದ, 5 ಅಡಿ ಆಳದ ಹೊಂಡ ಸೃಷ್ಟಿಯಾಗಿದ್ದು, ಇನ್ನೊಮ್ಮೆ ನದಿಯಲ್ಲಿ ಹೆಚ್ಚಿನ ನೀರು ಹರಿದರೆ ಕಿಂಡಿ ಅಣೆಕಟ್ಟಿಗೆ ಅಪಾಯ ಉಂಟಾಗಲಿದೆ.
ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸದೆ ತೋಟದಲ್ಲಿ ನೀರು ತುಂಬಿದೆ. ನಾಲ್ಕು ದಿನಗಳಿಂದ ತೋಟ ಪೂರ್ತಿ ಜಲಾವೃತವಾಗಿದೆ. ಸಲು ಕೂಡ ನೀರು ಪಾಲಾಗಿದೆ. ಈ ರೀತಿಯಾದರೆ ತೋಟ ಸಂಪೂರ್ಣ ಹಾನಿಗೀಡಾದರೆ ಹೊಣೆ ಯಾರು? ಗ್ರೆಶಿಯನ್ ವೇಗಸ್, ಕೃಷಿಕರು https://www.vijayavani.net/damage-in-various-parts-of-olamogru-village https://www.vijayavani.net/natural-disaster-preparedness-meeting