ಬೆಂಗಳೂರು: ನಗರದ ಜಕ್ಕೂರು ಕೆರೆಗೆ ರಾಸಾಯನಿಕ ಮತ್ತು ಕಲುಷಿತ ನೀರು ಸೇರ್ಪಡೆಯಾಗಿ ಸಾವಿರಾರು ಮೀನುಗಳು ಸತ್ತು ತೇಲಾಡುತ್ತಿವೆ. ಸತ್ತಿರುವ ಮೀನುಗಳ ರಾಶಿಯಿಂದ ದುರ್ವಾಸನೆ ಬರುತ್ತಿದ್ದು, ಸ್ಥಳೀಯರು ಹೈರಾಣಾಗಿದ್ದಾರೆ.
ಮೂರು ದಿನಗಳಿಂದ ಸುರಿದ ನಿರಂತರ ಮಳೆಯ ನೀರಿನ ಹರಿವಿನ ಜತೆಗೆ, ಕೊಳಚೆ ನೀರು ಮತ್ತು ರಾಸಾಯನಿಕ ನೀರು ಕೆರೆಯ ಒಡಲು ಸೇರಿದೆ. ಸಾಕಣೆಗೆ ಬಿಡಲಾಗಿದ್ದ ಸಾವಿರಾರು ಮೀನುಗಳು ಸಮರ್ಪಕ ಆಮ್ಲಜನಕ ಸಿಗದೆ ಸತ್ತು ತೇಲಾಡುತ್ತಿವೆ. ರಾಶಿಗಟ್ಟಲೆ ಸತ್ತು ಬಿದ್ದಿರುವ ಮೀನುಗಳಿಂದ ಸುತ್ತಲಿನ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ.
ಈ ಕುರಿತು ಸಾರ್ವಜನಿಕರು ಮತ್ತು ಜಕ್ಕೂರು ಕೆರೆಯ ನಡಿಗೆದಾರರ ಸಂಘದಿಂದ ಬಿಬಿಎಂಪಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಮೀನುಗಳು ಸತ್ತು ಒಂದು ದಿನವಾದರೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ: ನಗರದ ಕೆರೆಗಳಿಗೆ ಕಲುಷಿತ ನೀರು ಸೇರ್ಪಡೆ ಆಗುವುದನ್ನು ಮೂಲದಲ್ಲಿಯೇ ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಆದರೂ, ಬಿಬಿಎಂಪಿ ಅರಣ್ಯ ವಿಭಾಗ ಮತ್ತು ಕೆರೆಯ ಸ್ವಚ್ಛತೆ ಕಾಪಾಡಬೇಕಾದ ವಿಭಾಗಗಳ ನಿರ್ಲಕ್ಷ್ಯದಿಂದಾಗಿ ಕಲುಷಿತ ನೀರು ಕೆರೆಯ ಒಡಲು ಸೇರುತ್ತಿದೆ. ಕೂಡಲೇ, ಕೊಳಚೆ ನೀರು ಸೇರ್ಪಡೆಯನ್ನು ತಡೆಗಟ್ಟಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆಗೆ ಒತ್ತಾಯಿಸಿದ್ದಾರೆ.