ಜಿಲ್ಲೆ

24 ತಾಸು ಕಳೆದರೂ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮುಗಿದಿಲ್ಲ... ಮಧ್ಯಾಹ್ನ ಫಲಿತಾಂಶ ಹೊರಬೀಳುವ ಸಾಧ್ಯತೆ

arunakunigal

ಮೈಸೂರು: ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ 24 ಗಂಟೆ ಕಳೆದರೂ ಇನ್ನೂ ಮುಕ್ತಾಯಗೊಂಡಿಲ್ಲ.

ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯುತ್ತಿದೆ. ಬುಧವಾರ ಬೆಳಗ್ಗೆ 8 ಕ್ಕೆ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿತು. ರಾತ್ರಿ 12.45ಕ್ಕೆ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿತು. ಆದರೆ, ಗೆಲುವಿಗೆ ನಿಗದಿತ ಕೋಟಾ ತಲುಪದ ಹಿನ್ನೆಲೆಯಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯವನ್ನು ಮಧ್ಯರಾತ್ರಿ1.25ಕ್ಕೆ ಪ್ರಾರಂಭಿಸಲಾಯಿತು. ಗೆಲುವಿಗೆ 46,083 ಮತಗಳ ಕೋಟಾ ನಿಗದಿ ಪಡಿಸಲಾಗಿದೆ. ಬೆಳಗ್ಗೆ 8ರವರೆಗೆ ನಡೆದ ಎಣಿಕೆಯಲ್ಲೂ ಯಾವುದೇ ಅಭ್ಯರ್ಥಿ ನಿಗದಿತ ಕೋಟಾ ತಲುಪದ ಹಿನ್ನೆಲೆಯಲ್ಲಿ ‌ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಒಟ್ಟು 19 ಅಭ್ಯರ್ಥಿಗಳ ಪೈಕಿ 15 ಅಭ್ಯರ್ಥಿಗಳು ಎಲಿಮಿನೆಟ್ ಆಗಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 8ರ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ 35,228 ಮತಗಳು, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ 28,356 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು 18,221 ಮತಗಳನ್ನು ಪಡೆದಿದ್ದಾರೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ 32,592 ಮತಗಳು, ಬಿಜೆಪಿ 26,687 ಮತಗಳು, ಜೆಡಿಎಸ್ 17,072 ಮತಗಳನ್ನು ಪಡೆದಿದೆ.