ಜಿಲ್ಲೆ

ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ: ಆರಂಭಿಕ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್​

arunakunigal

ಮೈಸೂರು: ವಿಧಾನ ಪರಿಷತ್​ನ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ನಗರದ ಮಹಾರಾಣಿ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆಯಿಂದ ಒಟ್ಟು 28 ಟೇಬಲ್​ನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಬಹುತೇಕ ಎಲ್ಲ ಟೇಬಲ್​ನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಟ್ಟು 99,304 ಮತ ಚಲಾವಣೆಯಾಗಿದೆ‌. ಈ ಪೈಕಿ ಸಂಜೆ 4 ಗಂಟೆಯ ವೇಳೆಗೆ 28 ಸಾವಿರ ಮತ ಎಣಿಕೆ ನಡೆದಿದ್ದು, ಮಧು ಜಿ. ಮಾದೇಗೌಡ 3 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ‌. ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ 2ನೇ ಅತ್ಯಧಿಕ ಮತಗಳನ್ನು ಗಳಿಸಿದ್ದು, ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಮೂರನೇ ಸ್ಥಾನ, ರೈತ ಸಂಘದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಗೌಡ 4ನೇ ಸ್ಥಾನ, ಮಾಜಿ ಸಚಿವ ಈಶ್ವರಪ್ಪ ಅವರ ಮಾಜಿ ಆಪ್ತ ಕಾರ್ಯದರ್ಶಿ ವಿನಯ್ ಮತ ಗಳಿಕೆಯಲ್ಲಿ 5ನೇ ಸ್ಥಾನದಲ್ಲಿ ಇದ್ದಾರೆ.

ಮೊದಲ ಪ್ರಾಶಸ್ತ್ಯ ಮತದ ಎಣಿಕೆಯನ್ನು ಎರಡು ಸುತ್ತಿನಲ್ಲಿ ಎಣಿಸಲು ಚುನಾವಣಾ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೊದಲ ಸುತ್ತಿಲ್ಲಿ 49 ಸಾವಿರ ಮತ ಎಣಿಕೆ ನಡೆಯುತ್ತಿದೆ. 28 ಟೇಬಲ್​ಗಳಲ್ಲಿ ತಲಾ 1775 ಮತಗಳ ಎಣಿಕೆ ನಡೆಯುತ್ತಿದೆ. ಉಳಿದ ಮತ ಎರಡನೇ ಸುತ್ತಿನಲ್ಲಿ ನಡೆಯಲಿದೆ. ಮೊದಲ ಸುತ್ತಿನ ಎಣಿಕೆ ಸಂಜೆ 7 ಗಂಟೆಗೆ ಮುಗಿಯುವ ಸಾಧ್ಯತೆ ಇದೆ ಎಂದು ಚುನಾವಣಾ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.