ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ ರಾಜ್ಯಸಭೆ ಚುನಾವಣೆ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಕ್ಷಣದಲ್ಲಿ ಗೆಲುವಿನ ಮಅಲೆ ಯಾರಿಗೆ ಎಂಬ ಕುತೂಹಲಕ್ಕೆ ತೆರಬೀಳಲಿದೆ. ಆದರೆ, ಮತದಾನ ಮಾಡಲೆಂದು ಜೆಡಿಎಸ್ ಶಾಸಕರೊಂದಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಆಡಿದ ಆ ಒಂದು ಮಾತು 'ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡ್ರಾ ಎಚ್ಡಿಕೆ? ಕುಪೇಂದ್ರ ರೆಡ್ಡಿಗೆ ಸೋಲು ಖಚಿತವಾಯ್ತೆ?, ಕಾಂಗ್ರೆಸ್-ಜೆಡಿಎಸ್ ನಡುವಿನ ಕದನದಲ್ಲಿ ಬಿಜೆಪಿಗೆ ಲಾಭವಾಯ್ತೆ?' ಎಂಬ ಪ್ರಶ್ನೆಗಳು ಮೂಡಿವೆ.
'ಬಿಜೆಪಿ ಗೆಲುವಿಗೆ ಕಾರಣವಾದ ಸಿದ್ದರಾಮಯ್ಯ ಮತ್ತು ರಮೇಶ್ಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ. ಯಾಕಂದ್ರೆ 4ನೇ ಸ್ಥಾನಕ್ಕೆ ಬಿಜೆಪಿ ಗೆದ್ದರೆ ಅದಕ್ಕೆ ಇವರಿಬ್ಬರೇ ಕಾರಣ. ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ಗೌಡ ಕಾಂಗ್ರೆಸ್ಗೆ ಮತ ಹಾಕ್ತೀನಿ ಅಂದಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಜೆಡಿಎಸ್ಗೆ ಮತ ಹಾಕಲ್ಲ' ಎಂದು ಎಚ್ಡಿಕೆ ಹೇಳಿದರು. ಕಾಂಗ್ರೆಸ್ ಶಾಸಕರ 2ನೇ ಪ್ರಾಶಸ್ತ್ಯ ಮತಗಳು ಜೆಡಿಸ್ಗೆ ಬಂದರೆ ಕುಪೇಂದ್ರ ರೆಡ್ಡಿ ಗೆಲ್ಲಬಹುದು ಎಂದೂ ಎಚ್ಡಿಕೆ ಲೆಕ್ಕಾಚಾರ ಹಾಕಿದ್ದಾರೆ.