ರಾಮನಗರ: ಮಳೆ ನೀರು ನಗರದ ಖಾಸಗಿ ಆಸ್ಪತ್ರೆಗೆ ನುಗ್ಗಿದ್ದು, ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದೆ. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ವೈದ್ಯಕೀಯ ಉಪಕರಣಗಳು ಹಾನಿಯಾಗಿವೆ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ರಾಮಕೃಷ್ಣ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಸಂಪೂರ್ಣ ಮುಳುಗಡೆಯಾಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ಸಲಕರಣೆಗಳನ್ನ ನೀರಿನಿಂದ ಹೊರತೆಗೆಯಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ರಾಮನಗರದಲ್ಲಿ ಸೋಮವಾರ ಮುಂಜಾನೆಯಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಜನರ ಬದುಕು ಮೂರಾಬಟ್ಟೆಯಾಗಿದೆ. ಬಿಡದಿಯ ತೊರೆದೊಡ್ಡಿಯಲ್ಲಿ ಬೃಹತ್ ಆಲದ ಮರವೊಂದು ಕಾರಿನ ಮೇಲೆ ಬಿದ್ದು, ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಅರ್ಕಾವತಿ ನದಿ ನೀರಲ್ಲಿ ಹಸುವೊಂದು ಕೊಚ್ಚಿಕೊಂಡು ಹೋಗಿದೆ.
ಮೈಸೂರು-ಬೆಂಗಳೂರು ಹೆದ್ದಾರಿ ಕರೆಯಂತಾಗಿದ್ದು, ವಾಹನ ಸಂಚಾರ ಬಂದ್ ಆಗಿದೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ತಗ್ಗುಪ್ರದೇಶ, ಕೃಷಿ ಜಮೀನುಗಳಲ್ಲಾ ಜಲಾವೃತವಾಗಿದ್ದು, ಕೆಲವಡೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಹೊಳೆಯಂತಾದ ಹೆದ್ದಾರಿಯಲ್ಲೇ ವಾಹನಗಳು ನಿಂತಿವೆ.