ಜಿಲ್ಲೆ

'ಅಪ್ಪು'ಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಯುವಕ ಆತ್ಮಹತ್ಯೆ: ಅಭಿಮಾನಿಗಳೇ ದಯವಿಟ್ಟು ದುಡುಕಬೇಡಿ...

ಚಿಕ್ಕೋಡಿ: ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರ ಸಾವಿನ ಸುದ್ದಿ ಕೇಳಿ ಕಂಗೆಟ್ಟ ಅಭಿಮಾನಿಯೊಬ್ಬ, ನೇಣಿಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ಪುನೀತ್​ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ದುಡುಕಿನ ನಿರ್ಧಾರ ಕೈಗೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಅಥಣಿ ಪಟ್ಟಣದ ವಡ್ಡರಗಲ್ಲಿಯ ರಾಹುಲ ಗಾಡಿವಡ್ಡರ(22) ಮೃತ. ಪುನೀತ್​ ಇನ್ನಿಲ್ಲ ಎಂಬ ಸುದ್ದಿ ಕೇಳಿ ತೀವ್ರ ನೊಂದಿದ್ದ ರಾಹುಲ, ತನ್ನ ಸ್ನೇಹಿತರೊಂದಿಗೆ 'ಅಪ್ಪು' ಬ್ಯಾನರ್​ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದ. ಬಳಿಕ ಮನೆಗೆ ಬಂದು ನೇಣಿಗೆ ಕೊರಳೊಡ್ಡಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು. ಸಂಯಮದಿಂದ ವರ್ತಿಸಬೇಕು. ಶಾಂತಿಯುತವಾಗಿ, ಗೌರವಯುತವಾಗಿ ಅಪ್ಪು ಅವರನ್ನ ಕಳುಹಿಸಿಕೊಡಲು ಸಹಕರಿಸಿ. ದಯವಿಟ್ಟು ಯಾರೊಬ್ಬರೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಅಹಿತಕರ ಘಟನೆ ನಡೆಯಲು ಆಸ್ಪದ ಕೊಡಬೇಡಿ ಎಂದು ನಿನ್ನೆ ಮಧ್ಯಾಹ್ನವೇ ರಾಘವೇಂದ್ರ ರಾಜ್​ಕುಮಾರ್​ ಕೈಮುಗಿದು ಅಭಿಮಾನಿಗಳಲ್ಲಿ ಬೇಡಿಕೊಂಡಿದ್ದರು. ಆದರೂ ಕೆಲವರು ಸಾವಿನ ಮನೆಯ ಕದ ತಟ್ಟಲು ಯತ್ನಿಸುತ್ತಿರುವುದು ಅತ್ಯಂತ ವಿಷಾದನೀಯ.