ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಪ್ರೀತಿಯ ಅಪ್ಪು ಭೂತಾಯಿಯ ಮಡಿಲು ಸೇರಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಗ್ಗೆ 7.30ಕ್ಕೆ ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ, ಅಸಂಖ್ಯಾತ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇದರ ಜತೆಗೆ 'ಮತ್ತೆ ಹುಟ್ಟಿ ಬನ್ನಿ ಅಪ್ಪು' ಎಂಬ ಕೂಗು ಕಣ್ಣೀರಧಾರೆಯ ನಡುವೆಯೂ ಅನುರಣಿಸುತ್ತಿದೆ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಗೊತ್ತಿದ್ದರೂ ಲಕ್ಷಾಂತರ ಮಂದಿ ಕಂಠೀರವ ಸ್ಟುಡಿಯೋ ಬಳಿ ರಾತ್ರಿಯಿಂದಲೇ ಕಾಯುತ್ತಾ 'ಅಪ್ಪು... ಅಪ್ಪು... ಅಪ್ಪು...' ಎಂದು ಆಕ್ರಂದಿಸುತ್ತಿದ್ದ ದೃಶ್ಯ ಕರುಳು ಕಿವುಚಿದಂತಿತ್ತು. ಅಂತ್ಯಕ್ರಿಯೆ ಮುಗಿದ ಬಳಿಕವೂ ಅಭಿಮಾನಿಗಳ ಮಾತ್ರ ಸಮಾಧಿ ಬಳಿ ಹೋಗಲು ಕಾಯುತ್ತಲೇ ಇದ್ದಾರೆ. ಕಂಠೀರವ ಸ್ಟುಡಿಯೋ ಬಳಿ 144 ಸೆಕ್ಷನ್ ಜಾರಿ ಆಗಿದೆ. ಇನ್ನೂ 2 ದಿನ ಸಾರ್ವಜನಿಕರಿಗೆ ಪ್ರವೇಶ ಇಲ್ಲ.
ಇನ್ನು ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಪುನೀತ್ರ ಭಾವಚಿತ್ರ ಇಟ್ಟು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ದೀಪಗಳನ್ನ ಬೆಳಗುತ್ತಾ 'ಮತ್ತೆ ಹುಟ್ಟಿ ಬನ್ನಿ ಅಪ್ಪು, ನಿಮಗಾಗಿ ಕಾಯುತ್ತಿದ್ದೇವೆ' ಎಂದು ಕಣ್ಣೀರು ಹಾಕುತ್ತಿದ್ದಾರೆ.
ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ 'ರಾಜಕುಮಾರ'ನಂತೆ ಮೆರೆದಿದ್ದ ಕರುನಾಡಿನ 'ವೀರ ಕನ್ನಡಿಗ', ಸ್ಯಾಂಡಲ್ವುಡ್ನ 'ಪವರ್ಸ್ಟಾರ್', ಕೋಟ್ಯಂತರ ಜನರ ಪಾಲಿನ ಪ್ರೀತಿಯ 'ಅಪ್ಪು' ಇನ್ನು ನೆನಪು ಮಾತ್ರ.