ಸಾಂದರ್ಭಿಕ ಚಿತ್ರ  
ಜಿಲ್ಲೆ

ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ, ಮಧ್ಯರಾತ್ರಿ ಮತ್ತಿಬ್ಬರ ಸಾವು! ಚಾಮರಾಜನಗರ ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ಅವಘಡ

ಬೆಂಗಳೂರು: ಆಕ್ಸಿಜನ್​ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ದುರಂತ ಅಂತ್ಯ ಕಂಡ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಅವಘಡ ಯಲಹಂಕ ನ್ಯೂ ಟೌನ್​ನಲ್ಲಿ ಸಂಭವಿಸಿದೆ.

ಇಲ್ಲಿನ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಇಬ್ಬರು ಕೋವಿಡ್ ರೋಗಿಗಳು ಮೃತಪಟ್ಟ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ. ರಾತ್ರಿ 12:30ರ ಸುಮಾರಿಗೆ ಆಕ್ಸಿಜನ್ ಖಾಲಿಗಿದ್ದು, ರಾತ್ರಿ 1:30ರ ಸುಮಾರಿಗೆ ಆಕ್ಸಿಜನ್ ತಂದರಾದರೂ ಅಷ್ಟರಲ್ಲಿ ಇಬ್ಬರ ಪ್ರಾಣ ಹೋಗಿತ್ತು.

ಅರ್ಕ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಆಕ್ಸಿಜನ್​ ಖಾಲಿ ಆಗ್ತಿದ್ದಂತೆ ಇಲ್ಲಿನ ಸಿಬ್ಬಂದಿ ಯಲಹಂಕ ‌ನ್ಯೂ ಟೌನ್ ಪೊಲೀಸರಿಗೆ ಕರೆ ಮಾಡಿದ್ದು, ಇನ್​ಸ್ಪೆಕ್ಟರ್ ಸತ್ಯನಾರಾಯಣ್ ಆಸ್ಪತ್ರೆ ಬಳಿ ದೌಡಾಯಿಸಿದರು. ಕೂಡಲೇ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿದರು. ಮನವಿಗೆ ಸ್ಪಂದಿಸಿದ ಸೋನು ಸೂದ್ ಟ್ರಸ್ಟ್ ಸಿಬ್ಬಂದಿ, 11 ಆಕ್ಸಿಜನ್ ಸಿಲಿಂಡರ್ ಒದಗಿಸುವ ಮೂಲಕ ದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ. ಟ್ರಸ್ಟ್​ನ ಅಶ್ಮತ್, ರಾಧಿಕಾ, ರಾಘವ್ ಸಿಂಗಲ್, ಅಮಿತ್ ತಂಡ ಬೈಕ್ ಹಾಗೂ ಕಾರುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಸಿದ್ದಾರೆ.

ಆಕ್ಸಿಜನ್​ ಕೊರತೆಯಿಂದ ಮೃತಪಟ್ಟವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾರೆ. ಇವರನ್ನ ಶನಿವಾರ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆವು. ನನ್ನ ಅಕ್ಕನಿಗೆ 38 ವರ್ಷ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬ ಕಂಗಾಲಾಗಿದೆ ಎಂದು ಮೃತಳ ತಮ್ಮ ಅನಿಲ್ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.