ಉಪ್ಪಿನಂಗಡಿ: ಬಸ್‌ನಲ್ಲಿ ಬಂದ ಅಜ್ಜನೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪರಪ್ಪು ಸುಣ್ಣಲಡ್ಡ ನಿವಾಸಿ ಮುತ್ತಪ್ಪ ಶೆಟ್ಟಿ(70) ಮೃತರು. ಬೆಳಗ್ಗೆ ಗೇರುಕಟ್ಟೆಯಿಂದ ಸರ್ಕಾರಿ ಬಸ್ಸಿನಲ್ಲಿ ಬಂದು ಉಪ್ಪಿನಂಗಡಿಯಲ್ಲಿ ಇಳಿದ ಅವರು, ನೇತ್ರಾವತಿ ಸೇತುವೆ ಮೇಲಿನಿಂದ ಕೆಳಕ್ಕೆ ಹಾರಿದ್ದರು. ಈ ವೇಳೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವುದು ಕಂಡುಬಂದಿದೆ.
ತಕ್ಷಣ ಸ್ಥಳೀಯರು ನದಿಗೆ ಹಾರಿ ರಕ್ಷಿಸಲು ಮುಂದಾದರು. ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅವರ ಅಂಗಿಯ ಕಿಸೆಯಲ್ಲಿ ಬಸ್ ಟಿಕೆಟ್ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಸ್ವಗ್ರಾಮದಿಂದ ಬಸ್‌ನಲ್ಲಿ ಪ್ರಯಾಣಿಸಿದ್ದು, ಉಪ್ಪಿನಂಗಡಿಯಲ್ಲಿ ಇಳಿದಿದ್ದಾರೆ ಎಂಬುದು ಗೊತ್ತಾಗಿ ಅಲ್ಲಿ ವಿಚಾರಿಸಿದಾಗ ಮುತ್ತಪ್ಪ ಗೇರುಕಟ್ಟೆಯವ ಎಂದು ಗೊತ್ತಾಗಿದೆ. ಕಾಲಿನಲ್ಲಿ ಬ್ಯಾಂಡೇಜ್ ಇದ್ದು, ಔಷಧ ತರಲೆಂದು ಮನೆಯಲ್ಲಿ ಹೇಳಿ ಹೊರ ಬಂದಿದ್ದರು. ಆದರೆ, ಔಷಧ ತೆಗೆದುಕೊಂಡು ಮನೆಗೆ ವಾಪಸ್ ಹೋಗುವ ಬದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆ ಬಳಿಕ ಬಯಲಾಗಬೇಕಿದೆ.