ಜಿಲ್ಲೆ

ರಾಹುಲ್ ಗಾಂಧಿಗೆ ಹೆಣ್ಣು ಮಕ್ಕಳ ಬಗ್ಗೆ ಗೊತ್ತಿದ್ದರೆ ಯಾವಾಗಲೋ ಮದ್ವೆ ಆಗಿಬಿಡ್ತಿದ್ರು: ಎ.ನಾರಾಯಣಸ್ವಾಮಿ

ತುಮಕೂರು: ರಾಹುಲ್ ಗಾಂಧಿಗೆ ಹೆಣ್ಣು ಮಕ್ಕಳ ಬಗ್ಗೆ ಗೊತ್ತಿದ್ದರೆ ಯಾವಾಗಲೋ ಮದ್ವೆ ಆಗಿಬಿಡ್ತಾ ಇದ್ರು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್​ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ರಾಹುಲ್​ ಗಾಂಧಿ, ''ಹಿಜಾಬ್​ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಿ ಮಾಡುವ ಮೂಲಕ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನ ಕಸಿಯಲಾಗುತ್ತಿದೆ. ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ. ಅವಳು ಭೇದಭಾವ ಮಾಡುವುದಿಲ್ಲ'' ಎಂದಿದ್ದಾರೆ. ಈ ಕುರಿತು ತುಮಕೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎ.ನಾರಾಯಣಸ್ವಾಮಿ, ರಾಹುಲ್ ಗಾಂಧಿಗೆ ಹೆಣ್ಣು ಮಕ್ಕಳ ಬಗ್ಗೆ ಗೊತ್ತಿದ್ದರೆ ಯಾವಾಗಲೋ ಮದ್ವೆ ಆಗಿಬಿಡ್ತಾ ಇದ್ರು ಎನ್ನುತ್ತಾ ಗಹಗಹಿಸಿ‌ ನಕ್ಕರು.

ಹಿಜಾಬ್ ವಿವಾದಕ್ಕೆ ಅವಕಾಶ ಕೊಡಬಾರದಿತ್ತು. ಆದಷ್ಟು ಬೇಗ ನಮ್ಮ ಸರ್ಕಾರ ಮಧ್ಯಪ್ರವೇಶ ಮಾಡುತ್ತೆ. ಈಗಾಗಲೇ ನಮ್ಮ ಮಂತ್ರಿಗಳು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಕೇಸ್ ಇದೆ. ನ್ಯಾಯಾಲಯದ ತೀರ್ಪಿಗೆ ಕಾಯ್ತಿದ್ದೀವಿ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಧರ್ಮ, ಜಾತಿ ನಮ್ಮ ಕಣ್ಮುಂದೆ ಬರಬಾರದು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ತೀರ್ಮಾನ ಮಾಡುತ್ತೆ ಸಚಿವ ನಾರಾಯಣಸ್ವಾಮಿ ತಿಳಿಸಿದರು.

ರಾಹುಲ್​ ಗಾಂಧಿ ಟ್ವೀಟ್​ಗೆ ಕರ್ನಾಟಕ ಬಿಜೆಪಿಯೂ ಟೀಕಿಸಿದೆ. ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಟೀಕಿಸಿದೆ.