ಜಿಲ್ಲೆ

ನಾಟಿ ಕೋಳಿ ತಿಂದು ವಿಶ್ರಮಿಸುತ್ತಿದ್ದ ಚಿರತೆ ಕೋಳಿಗೂಡಿನಲ್ಲೇ ಸೆರೆಯಾಯ್ತು!

arunakunigal

ಮೈಸೂರು: ತಾಲೂಕಿನ ಜಯಪುರ ಗ್ರಾಮದಲ್ಲಿ ಕೋಳಿ ಫಾರ್ಮ್​ಗೆ ಲಗ್ಗೆ ಇಟ್ಟು ನಾಟಿ ಕೋಳಿ ತಿಂದು ವಿಶ್ರಮಿಸುತ್ತಿದ್ದ ಚಿರತೆಯೊಂದು ಕೋಳಿಗೂಡಿನಲ್ಲೇ ಮಂಗಳವಾರ ಮುಂಜಾನೆ ಸೆರೆಯಾಗಿದೆ.

ಜಯಪುರ ಗ್ರಾಮದ ರೈತ ಬಸಪ್ಪ ಅವರು ತಮ್ಮ ತೋಟದ ಮನೆಯಲ್ಲಿ 150 ನಾಟಿ ಕೋಳಿಗಳನ್ನು ಫಾರ್ಮ್​ನಲ್ಲಿ ಸಾಕಿದ್ದರು. ಈ ಫಾರ್ಮ್​ಗೆ ಸೋಮವಾರ ರಾತ್ರಿ ಆಗಮಿಸಿದ ಚಿರತೆ ಕೋಳಿಗಳನ್ನು ತಿಂದು ಆರಾಮಾಗಿ ಫಾರ್ಮ್ ನಲ್ಲೇ ರಾತ್ರಿ ವಿಶ್ರಾಂತಿ ಪಡೆದಿದೆ.

ಬೆಳಗಿನ ಜಾವ 4.45ರ ವೇಳೆಗೆ ಕೋಳಿಗಳನ್ನು ನೋಡಲು ಬಸಪ್ಪ ಫಾರ್ಮ್​ಗೆ ಆಗಮಿಸಿ ಟಾರ್ಚ್ ಬಿಟ್ಟ ಸಂದರ್ಭ ಚಿರತೆ ಘರ್ಜಿಸಿತು. ತಕ್ಷಣ ಬಾಗಿಲು ಹಾಕಿದ ಬಸಪ್ಪ ಅವರು ಚಿರತೆ ಹೊರ ಹೋಗದಂತೆ ನೋಡಿಕೊಂಡರು.

ಚಿರತೆ ಕೋಳಿ ಫಾರ್ಮ್​ಗೆ ಆಗಮಿಸಿದ ವಿಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.