ಜಿಲ್ಲೆ

ಚಾಮರಾಜಪೇಟೆ ಮೈದಾನಕ್ಕೆ ಕಂದಾಯ ಇಲಾಖೆಯೇ ಯಜಮಾನ: ಸಚಿವ ಅಶೋಕ್

arunakunigal

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ತನಗೆ ಸೇರಿದ್ದೆಂದು ಕೋರ್ಟ್‌ಗೆ ದಾಖಲೆ ಸಲ್ಲಿಸಲು ವಕ್ಫ್ ಬೋರ್ಡ್ ವಿಫಲವಾಗಿದ್ದು, 1964ರ ಅಧಿಕೃತ ದಾಖಲೆಗಳಲ್ಲಿರುವಂತೆ ಎರಡು ಎಕರೆಗೂ ಹೆಚ್ಚು ವಿಶಾಲದ ಮೈದಾನಕ್ಕೆ ಕಂದಾಯ ಇಲಾಖೆಯೇ ಯಜಮಾನ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್​, ಅಧಿಕೃತ ದಾಖಲೆಗಳ ಪ್ರಕಾರ ಚಾಮರಾಜಪೇಟೆ, ಸರ್ವೆ ನಂಬರ್, ಚಕ್‌ಬಂದಿ ಇದೆಯೇ ಹೊರತು ಯಾವುದೇ ಹೆಸರಿಲ್ಲ. ಅಲ್ಲಿ ಮಸೀದಿ ಇರುವುದೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಪ್ರೀಂ ಕೋರ್ಟ್ ಆದೇಶವಿದೆ, ಈ ಜಾಗ ತನ್ನದು ಎಂದು ವಕ್ಫ್ ಬೋರ್ಡ್ ಪದೇಪದೆ ವಾದಿಸಿ ತಾನೇ ಕೋರ್ಟ್ ಮೆಟ್ಟಿಲೇರಿತ್ತು. ಆ ಸ್ವತ್ತು ನಿಮ್ಮದೇ ಎಂದಾದರೆ ದಾಖಲೆ ಕೊಡಿ ಎಂದು ಕೋರ್ಟ್ ಸೂಚಿಸಿತು. ದಾಖಲೆ ನೀಡದ ಕಾರಣ 1964ರ ದಾಖಲೆಗಳ ಪ್ರಕಾರ ಕಂದಾಯ ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ. ಇದರಿಂದಾಗಿ ಚಾಮರಾಜಪೇಟೆ ಜಾಗ ವಕ್ಫ್ ಬೋರ್ಡ್‌ನದ್ದೂ ಅಲ್ಲ, ಬಿಬಿಎಂಪಿಗೂ ಸೇರಿದ್ದಲ್ಲ ಎಂದರು.

ಅನುಮತಿ ಕಡ್ಡಾಯ: ಸಾಮೂಹಿಕ ಪ್ರಾರ್ಥನೆ ಸೇರಿ ಯಾವುದೇ ಕಾರ್ಯಕ್ರಮ ಆಯೋಜಿಸುವುದಿದ್ದರೂ ಪೂರ್ವಾನುಮತಿ ಕಡ್ಡಾಯವೆಂಬ ನಿಯಮವಿದೆ. ಪ್ರತಿಯೊಬ್ಬರೂ ಪಾಲಿಸಲೇಬೇಕಾಗುತ್ತದೆ ಎಂದು ಆರ್.ಅಶೋಕ್ ಉತ್ತರಿಸಿದರು.

ರಾಷ್ಟ್ರಧ್ವಜಾರೋಹಣಕ್ಕೆ ಸಾಮಾನ್ಯವಾಗಿ ಅನುಮತಿ ಬೇಕಾಗಿಲ್ಲ. ಆದರೆ ಅನಗತ್ಯ ಗೊಂದಲ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿ ಪರಿಸ್ಥಿತಿಯಿದ್ದಾಗ ಅನುಮತಿ ಪಡೆಯಲೇಬೇಕು ಎಂಬ ವಿವರಣೆ ನೀಡಿದರು.

ಧ್ವಜಾರೋಹಣ, ಗಣೇಶೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಮತಿ ಬಯಸಿ ಇದೂವರೆಗೆ ಯಾವುದೇ ಅರ್ಜಿಗಳು ಬಂದಿಲ್ಲ. ಸಲ್ಲಿಕೆಯಾದ ನಂತರ ಕಾನೂನುರೀತ್ಯ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರ್.ಅಶೋಕ್ ಹಾರಿಕೆ ಉತ್ತರ ನೀಡಿದರು.