ಮಂಗಳೂರು: ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ನಿಂತು ಕಿಟಕಿಯ ಕರ್ಟನ್ ಸರಿ ಮಾಡಲು ಹೋದ ಬಾಲಕಿಯೊಬ್ಬಳು 5ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಕಂಕನಾಡಿಯಲ್ಲಿ ಸಂಭವಿಸಿದೆ.
ಸೆಹರಾ ಇಮ್ತಿಯಾಝ್ (15) ಮೃತ ದುರ್ದೈವಿ. ನಗರದ ಲೂರ್ಡ್ಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಈಕೆ, ಕಂಕನಾಡಿಯ ವಿಶ್ವಾಸ್ ಕ್ರೌನ್ ಎಂಬ ಅಪಾರ್ಟ್ಮೆಂಟ್ ನಿವಾಸಿ ಇಮ್ತಿಯಾಝ್ ಎಂಬುವರ ಪುತ್ರಿ. ಬುಧವಾರ ಸಂಜೆ ಸುಮಾರು 4:30ಕ್ಕೆ ಫ್ಲ್ಯಾಟ್‌ನ ಬಾಲ್ಕನಿಯ ಸೈಡ್ ಕರ್ಟನ್ ಅನ್ನು ಕುರ್ಚಿ ಮೇಲೆ ಹತ್ತಿ ಸರಿಪಡಿಸುತ್ತಿದ್ದಳು. ಈ ವೇಳೆ ಆಯತಪ್ಪಿ 5ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡ ಈಕೆಯನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.