ಜಿಲ್ಲೆ

ಮಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು: ಡೆತ್​ನೋಟ್​ನ ಜಾಡು ಹಿಡಿದು ಹೋಗುತ್ತಿದ್ದಂತೆ ಆ ಲೇಡಿಯ ಸ್ಫೋಟಕ ರಹಸ್ಯ ಬಯಲು

ಮಂಗಳೂರು: ಮತಾಂತರಕ್ಕೆ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡ ಪ್ರಕರಣ ಬಗೆದಷ್ಟು ಆಳ ಎಂಬಂತಾಗಿದೆ. ಸಾವಿಗೂ ಮುನ್ನ ಮನೆಯ ಯಜಮಾನ ಬರೆದ ಡೆತ್​ನೋಟ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹಿಳೆಯೊಬ್ಬಳ ಕರಾಳ ಮುಖ ಬಯಲಾಗಿದೆ.

ಮಂಗಳೂರಿನ ಮೋರ್ಗನ್ಸ್ ಗೇಟ್​ನ ಮನೆಯೊಂದರಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಶವವಾಗಿ ಡಿ.8ರಂದು ಪತ್ತೆಯಾಗಿದ್ದರು. ನಾಗೇಶ್ ಶೆರಗುಪ್ಪಿ(30) ನೇಣುಬಿಗಿದ ಸ್ಥಿತಿಯಲ್ಲಿದ್ದರೆ, ಇವರ ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಮಲಗಿದ್ದಲ್ಲೇ ಶವವಾಗಿದ್ದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಈ ಕುಟುಂಬ, ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ನಾಗೇಶ್ ಚಾಲಕನಾಗಿದ್ದ. ವಿಜಯಲಕ್ಷ್ಮೀ ಅಪಾರ್ಟ್​ಮೆಂಟ್​ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಡಿ.7ರ ರಾತ್ರಿ ನಾಲ್ವರೂ ದುರಂತ ಅಂತ್ಯಕಂಡಿದ್ದು, ಮರುದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ ನಾಗೇಶ್​ ಬರೆದಿಟ್ಟಿದ್ದ ಡೆತ್​ನೋಟ್​ ಸಿಕ್ಕಿತ್ತು.

‘ನಮ್ಮ ಸಾವಿಗೆ ನೂರ್ ಜಹಾನ್ ಎಂಬಾಕೆಯೇ ಕಾರಣ. ಆಕೆ ನನ್ನ ಪತ್ನಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಗಲಾಟೆ ಆಗುತ್ತಿತ್ತು. ನಾನು ಎಷ್ಟೇ ಮನವೊಲಿಸಿದರೂ ನನ್ನ ಪತ್ನಿ ವಿಜಯಲಕ್ಷ್ಮೀ ನನ್ನ ಮಾತನ್ನು ಕೇಳುತ್ತಿರಲಿಲ್ಲ…’ ಎಂದು ಸಾವಿಗೂ ಮುನ್ನ ನಾಗೇಶ್​ ಡೆತ್​ನೋಟ್​ನಲ್ಲಿ ವಿವರಿಸಿದ್ದ. ಅಂದು ಆರೋಪಿ ನೂರ್​ಜಹಾನ್​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈಕೆಯ ಅಸಲಿ ಮುಖ ಬಯಲಾಗಿದೆ.

ಆರೋಪಿ ನೂರ್ ಜಹಾನ್​

ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಮತ್ತು ಪತ್ನಿ ವಿಜಯಲಕ್ಷ್ಮೀ ಕ್ಷುಲ್ಲಕ ವಿವಾರಕ್ಕೆ ಜಗಳ ನಡೆಯುತ್ತಿತ್ತು. ಗಂಡ-ಹೆಂಡತಿ ನಡುವಿನ ಜಗಳವನ್ನೇ ಬಂಡವಾಳ ಮಾಡಿಕೊಂಡ ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿದ್ದ ನೂರ್ ಜಹಾನ್, ನಾಗೇಶ್​ಗೆ ಡಿವೋರ್ಸ್ ಕೊಡುವಂತೆ ವಿಜಯಲಕ್ಷ್ಮೀಗೆ ಹೇಳಿದ್ದಳು. ಮುಸ್ಲಿಂ ಯುವಕನ ಜತೆ ಮದುವೆ ಮಾಡಿಸುವೆ ಎಂದೂ ಆಕೆಯ ತಲೆ ಕೆಡಿಸಿದ್ದಳು. ಅದಕ್ಕಾಗಿ ವಿಜಯಲಕ್ಷ್ಮೀಯ ಫೋಟೋ ಬಳಸಿ ಮುಸ್ಲಿಂ ಹುಡುಗನ ಹುಡುಕಾಟವನ್ನೂ ನೂರ್ ಜಹಾನ್ ಮಾಡಿದ್ದಳು. ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗುವಂತೆ ವಿಜಯಲಕ್ಷ್ಮೀಗೆ ನೂರ್ ‌ಜಹಾನ್ ಹೇಳಿದ್ದಳು. ಇದೇ ವಿಚಾರದಲ್ಲಿ ನಾಗೇಶ್ ‌ಮತ್ತು ವಿಜಯಲಕ್ಷ್ಮೀ ಮಧ್ಯೆ ಗಲಾಟೆ ನಡೆದು ಮಕ್ಕಳು ಮತ್ತು ಪತ್ನಿಯನ್ನು ಕೊಂದು ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ‌ ನೂರ್ ಜಹಾನ್​ನನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಸಾವಿಗೂ ಮುನ್ನ ಮನೆಬಿಟ್ಟು ಹೋಗಿದ್ದ ವಿಜಯಲಕ್ಷ್ಮೀ: ಎರಡು ತಿಂಗಳ ಹಿಂದೆ ಅಂದರೆ 2021ರ ಅಕ್ಟೋಬರ್​ನಲ್ಲಿ ವಿಜಯಲಕ್ಷ್ಮೀ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಪತ್ನಿಗಾಗಿ ಹುಡುಕಾಟ ನಡೆಸಿದ್ದ ನಾಗೇಶ್, ಪತ್ನಿ ಕೆಲಕ್ಕೆಂದು ಹೋಗಿದ್ದ ಪತ್ನಿ ವಾಪಸ್​ ಮನೆಗೆ ಬಂದಿಲ್ಲ, ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ, ದಯವಿಟ್ಟು ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ. ಈ ವಿಚಾರ ತಿಳಿದು ಠಾಣೆಗೆ ನೇರವಾಗಿ ಬಂದ ವಿಜಯಲಕ್ಷ್ಮೀ, ನನ್ನ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಅದಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಳು. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ನೂರ್ ಜಹಾನ್​ಳ ಮಾತು ಕೇಳಿ ವಿಜಯಲಕ್ಷ್ಮೀ ಮತಾಂತರಕ್ಕೆ ಮುಂದಾಗಿದ್ದಳು. ಇದರಿಂದ ಬೇಸತ್ತ ಗಂಡ, ಡಿ.7ರ ರಾತ್ರಿ ಪತ್ನಿ ಮತ್ತು ಮಕ್ಕಳನ್ನು ಕೊಂದು ಬಳಿಕ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾನೆ.