ಜಿಲ್ಲೆ

ಬೆಳ್ಳಂಬೆಳಗ್ಗೆ ಪ್ರೇಯಸಿಯ ತಂದೆಯನ್ನೇ ಭೀಕರವಾಗಿ ಕೊಂದ ಪ್ರಿಯಕರ! ಆ ಒಂದು ಕಾರಣಕ್ಕೆ ಹೀಗಾ ಮಾಡೋದು?

arunakunigal

ನೆಲಮಂಗಲ: ತಾನು ಪ್ರೀತಿಸುತ್ತಿದ್ದ ಪಕ್ಕದ ಮನೆಯ ಯುವತಿಯನ್ನು ತನ್ನೊಂದಿಗೆ ಮದುವೆ ಮಾಡಿಕೊಡಲು ನಿರಾಕರಿಸಿದ ಪ್ರೇಯಸಿಯ ತಂದೆಯನ್ನೇ ಪಾಗಲ್​ ಪ್ರೇಮಿಯೊಬ್ಬ ಬೆಳ್ಳಂಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಮಂಗಳವಾರ ನಡೆದಿದೆ. ನೆಲಮಂಗಲದ ಕುವೆಂಪುನಗರದ ನಾಗಪ್ಪ (49) ಕೊಲೆಯಾದವ. ನರೇಶ್ (28) ಕೊಲೆ ಆರೋಪಿ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಡಿಗೆ ಮೂಲದ ನಾಗಪ್ಪ 30 ವರ್ಷಗಳಿಂದ ಕುಟುಂಬದೊಂದಿಗೆ ನೆಲಮಂಗಲದ ಕುವೆಂಪು ನಗರದಲ್ಲಿ ನೆಲೆಸಿದ್ದರು. ದಂಪತಿಯ ಇಬ್ಬರು ಮಕ್ಕಳ ಪೈಕಿ, ಮೊದಲ ಮಗಳು ಬೆಂಗಳೂರಿನ ಮಲ್ಲೇಶ್ವರ ಬಳಿಯ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದಾಳೆ. ನಾಗಪ್ಪನ ಮನೆಯ ಪಕ್ಕದಲ್ಲೇ ನರೇಶ್ ವಾಸವಾಗಿದ್ದ. ಕಳೆದೆರಡು ವರ್ಷಗಳಿಂದ ನಾಗಪ್ಪನ ಹಿರಿಯ ಮಗಳು ಹಾಗೂ ನರೇಶ್ ಪ್ರೀತಿಸುತ್ತಿದ್ದರು. ಆದರೆ, ನಾಲ್ಕೈದು ದಿನಗಳಿಂದ ಯುವತಿ ನರೇಶ್‌ಗೆ ಕರೆ ಮಾಡಿರಲಿಲ್ಲ. ಇದರಿಂದ ಕುಪಿತನಾದ ಯುವಕ ಆ.23ರಂದು ಪಾನಮತ್ತನಾಗಿ ಯುವತಿಯ ಕಾಲೇಜು ಬಳಿ ಹೋಗಿ ಆಕೆಯೊಂದಿಗೆ ಜಗಳವಾಡಿ, ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದನಂತೆ.

ಅಂದೇ ರಾತ್ರಿ 8 ಗಂಟೆಗೆ ನೆಲಮಂಗಲಕ್ಕೆ ಬಂದ ನರೇಶ್​ ತನ್ನ ಸ್ನೇಹಿತನ ಜತೆ ನಾಗಪ್ಪನ ಮನೆಗೆ ಬಂದಿದ್ದ. ನಿಮ್ಮ ಮಗಳು ಮತ್ತು ನಾನು 2 ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದ್ದ ನಾಗಪ್ಪ, ಆಕೆ ಓದುತ್ತಿದ್ದಾಳೆ. ಸಂಬಂಧಿಕರ ಮಗನಿಗೆ ಕೊಟ್ಟು ಮದುವೆ ಮಾಡುವುದಾಗಿ ಹೇಳಿದ್ದರು. ಪ್ರೀತಿಗೆ ಅಡ್ಡಬರುತ್ತಿರುವ ನಿಮ್ಮಪ್ಪನಿಗೆ ಗತಿಕಾಣಿಸುವೆ ಎಂದು ಪ್ರೇಯಸಿಗೆ ನರೇಶ್​ ಧಮ್ಕಿ ಹಾಕಿದ್ದನಂತೆ.

ಮಂಗಳವಾರ (ಆ.24) ಬೆಳಗ್ಗೆ 5 ಗಂಟೆಯಲ್ಲಿ ಮಗನ ಜತೆ ಕೆಲಸಕ್ಕೆ ತೆರಳುತ್ತಿದ್ದ ನಾಗಪ್ಪನನ್ನು ಅಡ್ಡಗಟ್ಟಿದ ನರೇಶ್​, ಕಬ್ಬಿಣದ ರಾಡ್‌ನಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಈ ಕೃತ್ಯಕ್ಕೆ ಸ್ನೇಹಿತ ವರುಣ್​ ಎಂಬಾತನ ನೆರವು ಪಡೆದುಕೊಂಡಿದ್ದ. ಗಂಭೀರ ಗಾಯಗೊಂಡಿದ್ದ ನಾಗಪ್ಪ ಮೃತಪಟ್ಟಿದ್ದರು.

ಕೊಲೆಯಾದ ಮರುದಿನವೇ ಆರೋಪಿಗಳಾದ ನರೇಶ್​ (28), ಸುಭಾಷ್​ನಗರ ನಿವಾಸಿ ವರುಣ್​ (24) ಎಂಬುವವರನ್ನು ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣದ ಬಳಿ ನೆಲಮಂಗಲ ನಗರ ಠಾಣೆಯ ಸಿಪಿಐ ಎ.ವಿ.ಕುಮಾರ್​ ನೇತೃತ್ವದ ತಂಡ ಬಂಧಿಸಿದೆ.