

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಮೊನ್ನೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮತ್ತೊಂದು ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಉತ್ತರ ಭಾರತ ಮೂಲದ ಯುವತಿ ಮೈಸೂರು ನಗರದ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಆ.24ರಂದು ಚಾಮುಂಡಿಬೆಟ್ಟದ ತಪ್ಪಲಿನ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್ನ ಗುಡ್ಡದ ಬಳಿ ಸ್ನೇಹಿತನೊಂದಿಗೆ ಇದ್ದಳು. ಇವರಿಬ್ಬರೂ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದಾಗ ಅಲ್ಲಿಗೆ ಬಂದ ಐವರು ಕಾಮುಕರ ತಂಡ ಆ ದೃಶ್ಯವನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ನಂತರ ವಿಡಿಯೋ ತೋರಿಸಿ, 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ಯುವತಿ ಮತ್ತು ಸ್ನೇಹಿತ ಒಪ್ಪಿಕೊಂಡಿದ್ದರಂತೆ.
ಮಧ್ಯರಾತ್ರಿಯಾದರೂ ಅಷ್ಟೊಂದು ಹಣ ಹೊಂದಿಸಲು ಅವರಿಬ್ಬರಿಗೂ ಸಾಧ್ಯವಾಗಿಲ್ಲ. ಆಗ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೆ, ಆಕೆಯ ಸ್ನೇಹಿತನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಕಾಮುಕರ ತಂಡ ಪರಾರಿಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲರೂ 20 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದು, ಕನ್ನಡದಲ್ಲೇ ಮಾತನಾಡುತ್ತಿದ್ದರು ಘಟನೆ ಬಗ್ಗೆ ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆರೋಪಿಗಳೆಲ್ಲರೂ ಕುಡಿದಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಬಿಯರ್ ಬಾಟಲಿ ಪತ್ತೆಯಾಗಿದೆ. ಆ. 24ನೇ ತಾರೀಖಿನ ಸಂಜೆ ಆ ಸ್ಥಳದ ಸುತ್ತಮುತ್ತಲಿನಲ್ಲಿ ಮೊಬೈಲ್ ಟವರ್ ಲೊಕೇಷನ್ ಟ್ರೇಸಿಂಗ್ ಮೂಲಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.