ಜಿಲ್ಲೆ

ಪ್ರೇಯಸಿ ಜತೆ ಮದ್ವೆಯಾದವ ಶಾಲಾ ಮೈದಾನದಲ್ಲಿ ಹಾಡಹಗಲೇ ಬೆಂಕಿ ಹಚ್ಕೊಂಡು ದುರಂತ ಸಾವು!

arunakunigal

ಕುಣಿಗಲ್(ತುಮಕೂರು)​: ಹಾಡಹಗಲೇ ಶಾಲಾ ಮೈದಾನದಲ್ಲಿ ಯುವಕನೊಬ್ಬ ಮೈಮೇಲೆ ಡೀಸೆಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ದುರಂತ ಅಂತ್ಯ ಕಂಡ ಘಟನೆ ತುಮಕೂರು ಜಿಲ್ಲೆ ಕುಣಿಗಲ್​ ಪಟ್ಟಣದಲ್ಲಿ ಸಂಭವಿಸಿದೆ.

ಕೊತ್ತಗೆರೆ ಹೋಬಳಿ ಬೊಮ್ಮಡಿಗೆರೆಯ ಬಿ.ಎಂ.ಹನುಮಂತ (21) ಮೃತ ದುರ್ದೈವಿ. ಡಿ.17ರ ಮಧ್ಯಾಹ್ನ ಕುಣಿಗಲ್​ ಪಟ್ಟಣದ ಜಿಕೆಬಿಎಂಎಸ್​ ಶಾಲಾ ಮೈದಾನದಲ್ಲಿ ತನ್ನ ಮೈಮೇಲೆ ಡೀಸೆಲ್​ ಸುರಿದುಕೊಂಡ ಯುವಕ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಾರೂ ಬದುಕಲಿಲ್ಲ. ಅಷ್ಟಕ್ಕೂ ಈತ ಬೆಂಕಿ ಹಚ್ಚಿಕೊಂಡದ್ದು ಪ್ರೀತಿಗಾಗಿ!

ಒಂದು ವರ್ಷದಿಂದ ಹನುಮಂತ ಬೇರೆ ಜಾತಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆ ಜತೆ ಮದುವೆಯನ್ನೂ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ, ಆಕೆ ಯಾರು ಏನು ಎಂಬುದು ಗೊತ್ತಾಗಿಲ್ಲ. ಮಗನ ಪ್ರೀತಿ ವಿಷಯ ತಿಳಿದ ಕುಟುಂಬಸ್ಥರು, ಪ್ರೀತಿ-ಪ್ರೇಮ ಎಂದು ಜೀವನ ಹಾಳು ಮಾಡಿಕೊಳ್ಳಬೇಡ ಎಂದು ಹನುಮಂತನಿಗೆ ಬುದ್ಧಿವಾದ ಹೇಳಿದ್ದರು. ಜಿಗುಪ್ಸೆಗೊಂಡ ಯುವಕ ಕುಣಿಗಲ್​ ಪಟ್ಟಣದ ಜಿಕೆಬಿಎಂಎಸ್​ ಶಾಲಾ ಮೈದಾನಕ್ಕೆ ಬಾಟಲಿಯಲ್ಲಿ ಡೀಸೆಲ್​ ತುಂಬಿಕೊಂಡು ಬಂದಿದ್ದ. ನೋಡನೋಡುತ್ತಿದ್ದಂತೆ ಮೈಮೇಲೆ ಡೀಸೆಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚೀರಾಡಿದ್ದಾನೆ. ಕೂಡಲೇ ಪರಿಚಿತರು ಸ್ಥಳೀಯ ಆಸ್ಪತ್ರೆಗೆ ಯುವಕನ್ನು ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಾನೆ. ಕುಣಿಗಲ್​ ಪಟ್ಟಣದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.