ಮೈಸೂರು: ಮೇಡಂ ನರ್ಸ್‌ಗಳು ಬಾಯಿಗೆ ಬಂದಂತೆ ಬೈತಾರೆ, ಗಾರ್ಡ್‌ಗಳು ಗೂಂಡಾಗಿರಿ ಮಾಡ್ತಾರೆ. ಆಸ್ಪತ್ರೆಯಲ್ಲಿ ನೀರಿಲ್ಲ, ಕೇಳಿದ್ರೆ ಯಾರೂ ಕೊಡಲ್ಲ. ಇಲ್ಲಿ ಯಾವುದೂ ಸರಿ ಇಲ್ಲ ಮೇಡಂ... ಎಂದು ಕರೊನಾ ಸೋಂಕಿತರ ಸಂಬಂಧಿಕರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಳಿ ಕಣ್ಣೀರಿಟ್ಟ ಪರಿ ಇದು.
ಕೆ.ಆರ್.ಆಸ್ಪತ್ರೆಗೆ ಇಂದು(ಸೋಮವಾರ) ಭೇಟಿ ನೀಡಿದ್ದ ರೋಹಿಣಿ ಸಿಂಧೂರಿಯನ್ನ ಸುತ್ತುವರೆದ ರೋಗಿಗಳ ಸಂಬಂಧಿಕರು, ಇಲ್ಲಿ ಯಾವುದೂ ಸರಿ ಇಲ್ಲ ಮೇಡಂ. ದಯವಿಟ್ಟು ಅವ್ಯವಸ್ಥೆ ಸರಿ ಮಾಡಿಕೊಡಿ ಎಂದು ಅಳಲುತೋಡಿಕೊಂಡರು. ಇದನ್ನೂ ಓದಿರಿ ಕರೊನಾ ಸೋಂಕಿತ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳದ ಅಳಿಯ! ಆ ಮನೆಯೇನೂ ಆತನದ್ದಲ್ಲ…
ಸ್ಕ್ಯಾನಿಂಗ್, ಟೆಕ್ನಿಷಿಯನ್ ವ್ಯವಸ್ಥೆ ಚೆನ್ನಾಗಿದ್ದರೂ ಹೊರಗೆ ಕಳುಹಿಸುತ್ತಾರೆ. ಆಸ್ಪತ್ರೆಯಲ್ಲಿ ಔಷಧ, ಮಾತ್ರೆ ಇದ್ದರೂ ಹೊರಗೆ ತರಲು ಹೇಳುತ್ತಾರೆ. ಒಳಗೆ ನಮ್ಮನ್ನೂ ಬಿಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಹೇಳುತ್ತಿದ್ದಂತೆ ಅವರನ್ನ ಸಮಾಧಾನ ಪಡಿಸಿದ ರೋಹಿಣಿ ಸಿಂಧೂರಿ, ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಗಳ ಸಮಸ್ಯೆ ಕೇಳಲು ಹೆಲ್ಪ್ ಡೆಸ್ಕ್ ಮಾಡಲಾಗುತ್ತೆ. ನಾಳೆಯಿಂದ ಸಮಸ್ಯೆಯನ್ನ ಆದಷ್ಟು ಕಡಿಮೆ ಮಾಡುತ್ತೇವೆ. ಯಾರನ್ನೂ ಒಳಗೆ ಬಿಡಲ್ಲ. ಅರ್ಥ ಮಾಡಿಕೊಳ್ಳಿ. ನಮ್ಮ ಮನೆಯಲ್ಲೂ ಪಾಸಿಟಿವ್ ಪೇಷೆಂಟ್ ಇದ್ದಾರೆ. ನಾವು ನಿಮಗಾಗಿ ಕೆಲಸ ಮಾಡ್ತಾ ಇರೋದು. ನಿಮ್ಮ ಸಮಸ್ಯೆ ಏನಿದೆ. ಹೆಲ್ಪ್ ಡೆಸ್ಕ್ ನಲ್ಲಿ ರಿಜಿಸ್ಟರ್ ಮಾಡಿ ಎಂದರು.
ಮೇಡಂ ನೀವೂ ಒಂದು ಹೆಣ್ಣಾಗಿ ಇಷ್ಟೊಂದು ಸೇವೆ ಮಾಡ್ತಿದ್ದೀರಾ. ನಿಮಗೆ ನಮ್ಮ ಧನ್ಯವಾದಗಳು, ಆದರೆ ಈ ಸಮಸ್ಯೆ ಬಗೆಹರಿಸಿ ಎಂದು ಕೈ ಮುಗಿದರು. ಪ್ರತಿ ಪೇಷೆಂಟ್ ಹೆಸರಿನಲ್ಲಿ ಒಂದೊಂದು ರಿಜಿಸ್ಟರ್ ತೆರೆಯಿರಿ. ಪ್ರತಿಯೊಬ್ಬರೂ ಕಂಪ್ಲೆಂಟ್ ಅನ್ನು ರಿಜಿಸ್ಟರ್ ಮಾಡಲಿ. ಸ್ವತಃ ನಾನೇ ಬಂದು ನೋಡುತ್ತೇನೆ ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪಿಪಿಇ ಕಿಟ್ ಧರಿಸಿ ಕೆ.ಆರ್.ಆಸ್ಪತ್ರೆಯ ಸ್ಟೋನ್ ಬಿಲ್ಡಿಂಗ್‌ಗೆ ಭೇಟಿ ಕೊಟ್ಟ ರೋಹಿಣಿ ಸಿಂಧೂರಿ, ಬ್ಲಾಕ್ ಫಂಗಸ್ ರೋಗಿಗಳಿರುವ ವಾರ್ಡ್‌ಅನ್ನು ಪರಿಶೀಲನೆ ನಡೆಸಿದರು. ಸುಮಾರು ಅರ್ಧ ಗಂಟೆ ಕಾಲ ವೈದ್ಯರ ಜತೆ ಸಮಾಲೋಚನೆ ನಡೆಸಿದರು. ಎಕ್ಸ್ ರೇ ಕಾಫಿ ಮುಂದೆ ಇಟ್ಟುಕೊಂಡು ಹಂತ ಹಂತದ ಚಿಕಿತ್ಸೆ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ಬ್ಲಾಕ್ ಫಂಗಸ್ ಏನಕ್ಕೆ ಬರುತ್ತಿದೆ? ಎಷ್ಟು ದಿನ ಚಿಕಿತ್ಸೆ ಕೊಡಬೇಕು? ಯಾವಾಗ ಗುಣಮುಖ ಆಗುತ್ತಾರೆ? ಔಷಧಿ- ಮಾತ್ರೆ ಹೇಗೆ ಎನ್ನುವ ಬಗ್ಗೆ ಮಾಹಿತಿ ಪಡೆದರು.