ಜಿಲ್ಲೆ

ಕಿತ್ತೂರು ಶಾಸಕ ಮತ್ತು ಪತ್ನಿಗೆ ಹೂಮಳೆ ಸುರಿಸಿದ ಪೊಲೀಸರು! ವಿಡಿಯೋ ವೈರಲ್​, ಗುಲಾಮಗಿರಿ ನಡೆಗೆ ಜನ್ರ ಆಕ್ರೋಶ

ಬೆಳಗಾವಿ: ಕಿತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ್ ಮತ್ತು ಅವರ ಪತ್ನಿಗೆ ಪೊಲೀಸ್​ ಅಧಿಕಾರಿಗಳು ಹೂಮಳೆ ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶಾಸಕರ ಮನೆಯಲ್ಲಿ ಪೊಲೀಸ್​ ಗುಲಾಮಗಿರಿ ಸಲ್ಲದು. ಪೊಲೀಸ್ ಇಲಾಖೆಯನ್ನೇ ಶಾಸಕರು ತನ್ನ ಕಂಟ್ರೋಲ್​ನಲ್ಲಿ ಇಟ್ಟುಕೊಂಡಿದ್ದಾರೆ. ಇದು ಶಾಸಕನ ಅಂಧಾದರ್ಬಾರ್ ಎಂದು ಸಾರ್ವಜನಿಕರು ಖಂಡಿಸಿದ್ದಾರೆ.

ಶಾಸಕ ಮಹಾಂತೇಶ ದೊಡ್ಡಗೌಡರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎರಡು ದಿನದ ಹಿಂದೆ ಖುದ್ದು ಅವರ ಮನೆಗೆ ತೆರಳಿದ ಪೊಲೀಸರು, ದಂಪತಿಯನ್ನು ಕೂರಿಸಿ ಪುಷ್ಪವೃಷ್ಟಿ ಮಾಡಿ ಜನ್ಮದಿನ ಆಚರಿಸಿದ್ದಾರೆ. ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ಐ ಶೀಗಿಹಳ್ಳಿ, ಎಸ್‌ಐ ವಿಶ್ವನಾಥ್ ಹಾಗೂ ಪೇದೆಗಳು ಭಾಗವಹಿಸಿದ್ದರು. ಇದು ಪೊಲೀಸ್ ಅಧಿಕಾರಿಗಳ ಗುಲಾಮಗಿರಿಯ ನಡೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಎಡೆಮಾಡಿದೆ.

ಶಾಸಕರಿಗೆ ಪೊಲಿಸರಿಂದ ಹೂಮಳೆ ಸುರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಸಾಮಾಜಿಕ ಜಾತಲಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.