ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿಬೀಳುವ ಗ್ರಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದ್ದು, ಅರ್ಜಿದಾರರ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 370ರ ಅಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದೆ.
ಗಿರಾಕಿಯಾಗಿ ತೆರಳಿದ್ದ ಅರ್ಜಿದಾರ: ಪ್ರಾಸಿಕ್ಯೂಷನ್ ಪ್ರಕಾರ, ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ 2021ರ ಸೆ.23ರಂದು ಬಂದ ಖಚಿತ ಮಾಹಿತಿ ಆಧರಿಸಿ ಮಾನವ ಕಳ್ಳಸಾಗಣೆ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕಿಯೆ ಆರಂಭಿಸಿದ್ದರು. ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಅಲ್ಲಿ ಅರ್ಜಿದಾರ ವ್ಯಕ್ತಿಯೂ ಇದ್ದರು. ಪೊಲೀಸರು ಶೋಧ ನಡೆಸಿದಾಗ ಅರ್ಜಿದಾರ ವ್ಯಕ್ತಿ ಗ್ರಾಹಕನಾಗಿ ಅಲ್ಲಿಗೆ ತೆರಳಿದ್ದರು ಎಂದುಕೊಂಡರೂ, ವೇಶ್ಯಾಗೃಹದಲ್ಲಿರುವ ಗ್ರಾಹಕನನ್ನು ಕ್ರಿಮಿನಲ್ ಮೊಕದ್ದಮೆಗಳಿಗೆ ಎಳೆಯಲಾಗುವುದಿಲ್ಲ ಎಂದು ಇದೇ ಹೈಕೋರ್ಟ್ ಹಲವಾರು ಪ್ರಕರಣಗಳಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದು ತಿಳಿಸಿರುವ ಪೀಠ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಹೈಕೋರ್ಟ್ ಹೇಳಿದ್ದೇನು?: ಮಾನವ ಕಳ್ಳಸಾಗಣೆ ತಡೆ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹ ಇಟ್ಟುಕೊಳ್ಳುವುದಕ್ಕೆ ಅಥವಾ ಯಾವುದೇ ಜಾಗವನ್ನು ವೇಶ್ಯಾಗೃಹವಾಗಿ ಬಳಸಲು ಅನುಮತಿ ನೀಡಿದರೆ ಶಿಕ್ಷೆ ವಿಧಿಸಬಹುದಾಗಿದೆ. ಇದೇ ಕಾಯ್ದೆ ಸೆಕ್ಷನ್ 4ರ ಪ್ರಕಾರ ವೇಶ್ಯಾವಾಟಿಕೆಯಿಂದ ಹಣ ಗಳಿಕೆ ಮಾಡಿ ಜೀವನ ಸಾಗಿಸುವವರಿಗೆ ಶಿಕ್ಷೆ ವಿಧಿಸಬಹುದು. ವೇಶ್ಯಾವಾಟಿಕೆಗಾಗಿ ವ್ಯಕ್ತಿಗಳನ್ನು ಸಾಗಿಸುವುದು, ಪ್ರಚೋದಿಸುವುದು ಅಥವಾ ಕರೆದೊಯ್ಯುವುದಕ್ಕೆ ಶಿಕ್ಷೆ ವಿಧಿಸಲು ಸೆಕ್ಷನ್ 5ರಲ್ಲಿ ಅವಕಾಶವಿದ್ದು, ಸೆಕ್ಷನ್ 6ರ ಪ್ರಕಾರ ವೇಶ್ಯಾವಾಟಿಕೆ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಿಟ್ಟರೆ ಶಿಕ್ಷಿಸಬಹುದು. ಆದರೆ, ಅರ್ಜಿದಾರರು ಈ ಯಾವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ದೂರಿನಲ್ಲಿ ಹೇಳಲಾಗಿಲ್ಲ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ಊರ್ಜಿತವಾಗದು ಎಂದು ನ್ಯಾಯಪೀಠ ಹೇಳಿದೆ.