ಜಿಲ್ಲೆ

ಬಿಜೆಪಿಗೆ ಒಲಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗಾದಿ: ಈರೇಶ ಅಂಚಟಗೇರಿ, ಉಮಾ ಮುಕುಂದ ಆಯ್ಕೆ

arunakunigal

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಗಾದಿ ಬಿಜೆಪಿಗೆ ಒಲಿದಿದೆ. ಈರೇಶ ಅಂಚಟಗೇರಿ ಮೇಯರ್​ ಸ್ಥಾನ ಅಲಂಕರಿಸಿದರೆ, ಉಪ‌ ಮೇಯರ್ ಸ್ಥಾನಕ್ಕೆ ಉಮಾ ಮುಕುಂದ ಆಯ್ಕೆಯಾದರು.

ಶನಿವಾರ ಬೆಳಗ್ಗೆ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಮಯೂರ ಮೋರೆ, ಉಪಮೇಯರ್ ಸ್ಥಾನಕ್ಕೆ ದೀಪಾ ನೀರಲಕಟ್ಟಿ ನಾಮಪತ್ರ ಸಲ್ಲಿಸಿದರು. ಇತ್ತ ಬಿಜೆಪಿ ಅಭ್ಯರ್ಥಿಗಳಾಗಿ ಈರೇಶ ಅಂಚಟಗೇರಿ ಮತ್ತು ಉಮಾ ಮುಕುಂದ ಅಖಾಡಕ್ಕಿಳಿದಿದ್ದರು. ಎಐಎಂಐಎಂ ನಿಂದ ಮೇಯರ್ ಸ್ಥಾನಕ್ಕೆ ನಜೀರ್ ಹೊನ್ಯಾಳ ಹಾಗೂ ಉಪ‌ ಮೇಯರ್ ಸ್ಥಾನಕ್ಕೆ ವಹೀದಾ ಕಿತ್ತೂರು ಸ್ಪರ್ಧಿಸಿದ್ದರು.

ಮೇಯರ್-ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ತಲಾ 50 ಹಾಗೂ 51 ಮತಗಳನ್ನು ಪಡೆದರು. ಕಾಂಗ್ರೆಸ್​ನಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಯೂರ ಮೋರೆ 35 ಮತ ಪಡೆದರೆ, ಉಪ‌ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ದೀಪಾ ನೀರಲಕಟ್ಟಿ 35 ಮತ ಗಳಿಸಿದರು. ಪಾಲಿಕೆಯ ಒಟ್ಟು 82 ಸದಸ್ಯರು ಹಾಗೂ 7 ಜನಪ್ರತಿನಿಧಿಗಳು ಮತಾಧಿಕಾರ ಹೊಂದಿದ್ದರು.

ಧಾರವಾಡದ ವಾರ್ಡ್ ನಂ.4ರಿಂದ ಎರಡು ಬಾರಿ ಪಾಲಿಕೆ ಸದಸ್ಯರಾಗಿ ಈರೇಶ ಅಂಚಿಟಗೇರಿ ಆಯ್ಕೆ ಆಗಿದ್ದಾರೆ. ಹುಬ್ಬಳ್ಳಿಯ ವಾರ್ಡ್ ನಂ.44ರಿಂದ ಮೊದಲ ಬಾರಿಗೆ ಪಾಲಿಕೆ ಸದಸ್ಯೆ ಆಗಿ ಆಯ್ಕೆಯಾದ ಉಮಾ ಮುಕುಂದಗೆ ಉಪಮೇಯರ್​ ಪಟ್ಟ ಒಲಿದಿದೆ. ಬೆಳಗಾವಿ ‌ಪ್ರಾದೇಶಿಕ‌ ಆಯುಕ್ತ ಆಮ್ಲಾನ್ ಬಿಸ್ವಾಸ್ ಚುನಾವಣಾ ಅಧಿಕಾರಿಯಾಗಿದ್ದರು.