ಆನೇಕಲ್: ಸದಾ ಒಂದಿಲ್ಲೊಂದು ಅಕ್ರಮದ ಬಗ್ಗೆ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಬೆಳಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗದ ಹರ್ಷನ ಕೊಲೆ ಆರೋಪಿಗಳು ಜೈಲಿನಲ್ಲಿದ್ದುಕೊಂಡೇ ಆಪ್ತರಿಗೆ ವಿಡಿಯೋ ಕಾಲ್ ಮಾಡಿ ಮಾತಾಡಿರುವ ದೃಶ್ಯ ವೈರಲ್ ಆಗಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯವೂ ಟೀಕಿಸಿತ್ತು. ಈ ಹಿನ್ನೆಲೆ ಭೇಡಿ ನೀಡಿದ ಗೃಹ ಸಚಿವರು, ಜೈಲಿನಲ್ಲಿರುವ ಆಸ್ಪತ್ರೆ, ಅಡುಗೆ ಕೋಣೆ, ಸಜಾ ಬಂಧಿಗಳ ಬ್ಯಾರಕ್ಗಳನ್ನು ಪರಿಶೀಲನೆ ನಡೆಸಿದರು. ಜೈಲಿಗೆ ಕೋರಿಯರ್ ಮೂಲಕ ಮಾದಕವಸ್ತು ಸರಬರಾಜಾಗುತ್ತಿದೆ ಎಂಬ ಆರೋಪಗಳ ಕುರಿತು ಜೈಲು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಅಕ್ರಮ ಮಾತ್ರ ನಿಲ್ಲುತ್ತಿಲ್ಲ. ಜೈಲಿನಲ್ಲಿದ್ದುಕೊಂಡೇ ಮೊಬೈಲ್ ಮೂಲಕ ಧಮ್ಕಿ ಹಾಕೋದು, ಗಾಂಜಾ ಸೇವನೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಜೈಲಿನಲ್ಲಿ 4ಜಿ ಜಾಮರ್ ಅಳವಡಿಸಲಾಗುವುದು. ಜೈಲಿನ ಮುಖ್ಯ ಸಿಬ್ಬಂದಿಗೆ ಬಾಡಿ ಕ್ಯಾಮರಾ ಅಳವಡಿಸುವ ಯೋಚನೆ ನಡೆದಿದೆ. ಯಾವುದಾದ್ರೂ ಕೈದಿ ಮೊಬೈಲ್ ಬಳಸಿದರೆ, ಆ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡುವ ಬೇರೊಬ್ಬ ಕೈದಿಗೆ 2 ಸಾವಿರ ರೂಪಾಯಿ ಬಹುಮಾನ ಕೊಡಲಾಗುವುದು. ಸಿಕ್ಕಿಬಿದ್ದ ಕೈದಿಗೆ ಆತನ ಶಿಕ್ಷೆ ಮುಗಿದ ಬಳಿಕ ಮೊಬೈಲ್ ಬಳಕೆ ಕೇಸ್ ಆಧಾರದ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರಕ್ಕೆ ಮುಜುಗರ ಆಗುವಂತಹ ಯಾವುದೇ ಘಟನೆ ನಡೆದರೂ ಅದಕ್ಕೆ ಕಾರಣಕರ್ತರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ ಎಂದು ಜೈಲು ಸಿಬ್ಬಂದಿಗೆ ಎಚ್ಚರಿಸಿದ ಗೃಹ ಸಚಿವರು, ಜೈಲಿನೊಳಗೆ ಮೊಬೈಲ್, ಮಾದಕ ವಸ್ತು ಬಳಸುವವರನ್ನ ಹಿಡಿದುಕೊಟ್ಟ ಕೈದಿಗಳಿಗೆ ಜೈಲಿನ ಶಿಕ್ಷಾವಧಿ ಕಡಿತಗೊಳಿಸುವ ಬಗ್ಗೆ ಯೋಚನೆ ಮಾಡಲಾಗುವುದು ಎಂದರು.
ಕಾರಾಗೃಹದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಲಾಗಿದೆ. ಜೈಲಿನ ಒಳಗೆ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಕ್ಷಣಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ ಮುರುಗನ್ ಸಮಿತಿ ನೀಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ಹಲವಾರು ಅಧಿಕಾರಿಗಳನ್ನು ಜೈಲಿನಿಂದ ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳ ಸೇವೆಯನ್ನು ಅಮಾನತಿನಲ್ಲಿಡಲು ಶಿಫಾರಸು ಮಾಡಲಾಗಿದೆ ಎಂದರು.