ಜಿಲ್ಲೆ

ಅಷ್ಟೊತ್ತಿನಲ್ಲಿ ಯುವತಿ ನಿರ್ಜನ‌‌ ಪ್ರದೇಶಕ್ಕೆ ಹೋಗಬಾರದಿತ್ತು ಎಂದ ಗೃಹ ಸಚಿವ! ಛೇ ಇದೆಂಥಾ ಮಾತು?

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹೇಯ ಕೃತ್ಯವೆಸಗಿದ ಕಾಮುಕರನ್ನು ಬಂಧಿಸಿ ನಡುರಸ್ತೆಯಲ್ಲಿ ಗುಂಡಿಕ್ಕಿ ಕೊಲ್ಲಬೇಕು. ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು ಎಂದು ಸಾವಿರಾರು ವಿದ್ಯಾರ್ಥಿಗಳು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಪಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ, 'ಸಂತ್ರಸ್ತ ಯುವತಿ ನಿರ್ಜನ‌‌ ಪ್ರದೇಶಕ್ಕೆ ಹೋಗಬಾರದಿತ್ತು...' ಎನ್ನುವ ಮೂಲಕ ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಬಂಧೀಖಾನೆ‌ ಇಲಾಖೆಯ‌ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಗೃಹ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಘಟನೆಗೂ ಮುಂಚೆ ಯುವಕ-ಯುವತಿ ಅಂದು ರಾತ್ರಿ 7.30ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಹೋಗಬಾರದಿತ್ತು. ಆದರೆ ಹೋಗಬೇಡಿ ಎಂದು ತಡೆಯೋದಕ್ಕೂ ಆಗಲ್ಲ. ಸದ್ಯಕ್ಕೆ ಯುವಕ, ಯುವತಿ ಶಾಕ್‌ನಲ್ಲಿದ್ದಾರೆ. ಅವರ ಸಂಪೂರ್ಣ ಹೇಳಿಕೆ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದರು.

ಸಂತ್ರಸ್ತ ಯುವತಿ ನಿರ್ಜನ‌‌ ಪ್ರದೇಶಕ್ಕೆ ಹೋಗಬಾರದಿತ್ತು ಎಂಬ ಸಚಿವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಕೆಲ ಸಂಘಟನೆಗಳು ಒತ್ತಾಯಿಸಿವೆ.