ಜಿಲ್ಲೆ

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆ: ಇನ್ನೂ 4 ದಿನ ಭಾರೀ ಮಳೆ

arunakunigal

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಇನ್ನೂ 4 ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಜು.18ರಿಂದ ಜು.21ರವರೆಗೆ ಭಾರೀ ಮಳೆ ಬೀಳುವ ಮೂನ್ಸೂಚನೆಯಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಆಗಾಗ್ಗೆ ಚದುರಿದಂತೆ ಸಾಧಾರಣ ಮಳೆ ಸುರಿಯಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ಸರಾಸರಿ 20 ಸೆಂ.ಮೀ. ಮಳೆ ಬಿದ್ದಿದೆ.

ಶೇ.26 ಹೆಚ್ಚು ಮಳೆ: ಜೂ 1ರಿಂದ ಜು.16ರವರೆಗೆ ರಾಜ್ಯಾದ್ಯಂತ 336 ಮಿ.ಮೀ. ಮಳೆ ಬದಲಾಗಿ 423 ಮಿ.ಮೀ. ಮಳೆಯಾಗಿದ್ದು, ಶೇ.26 ವಾಡಿಕೆಗಿಂತ ಹೆಚ್ಚು ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ 103 ಮಿ.ಮೀ. ಮಳೆಯಾಗಬೇಕಿತ್ತು. 182 ಮಿ.ಮೀ. ಮಳೆಯಾಗಿದ್ದು, ಶೇ.77 ಹಾಗೂ ಉತ್ತರ ಒಳನಾಡಿನಲ್ಲಿ 158 ಮಿ.ಮೀ. ಮಳೆ ಬದಲಾಗಿ 191 ಮಿ.ಮೀ. ಮಳೆ ಬಿದ್ದಿದ್ದು, ಶೇ.21 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದೇ ರೀತಿ, ಮಲೆನಾಡು ಜಿಲ್ಲೆಗಳಲ್ಲಿ 670 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 826 ಮಿ.ಮೀ. ಮಳೆ ಸುರಿದಿದ್ದು, ಶೇ.23 ಹೆಚ್ಚು ಬಿದ್ದಿದೆ. ಕರಾವಳಿ ಜಿಲ್ಲೆಗಳಲ್ಲಿ 1,415 ಮಿ.ಮೀ. ಮಳೆ ಬದಲಾಗಿ 1,689 ಮಿ.ಮೀ. ಮಳೆಯಾಗಿದ್ದು, ಶೇ.10 ಹೆಚ್ಚುವರಿ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.