

ಚೆನ್ನೈ: ಖಾಸಗಿ ವಸತಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ರೊಚ್ಚಿಗೆದ್ದ ಜನರು ಶಾಲೆಗೆ ನುಗ್ಗಿ 14ಕ್ಕೂ ಹೆಚ್ಚು ಶಾಲಾ ಬಸ್ಗಳಿಗೆ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದಾರೆ. ಟ್ರ್ಯಾಕ್ಟರ್ ಮೂಲಕ ಸ್ಕೂಲ್ ಬಸ್ಗಳಿಗೆ ಡಿಕ್ಕಿ ಹೊಡೆದು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಘಟನೆ ತಮಿಳುನಾಡಿನ ಚಿಲ್ಲಕುರಿಚಿ ಜಿಲ್ಲೆಯ ಚಿನ್ನಾ ಸೇಲಂ ಸಮೀಪದ ಕಣಿಯಮೂರ್ನ ಖಾಸಗಿ ಶಾಲೆಯೊಂದರಲ್ಲಿ ಭಾನುವಾರ ಸಂಭವಿಸಿದ್ದು, ಸ್ಥಳದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ಸೃಷ್ಟಿಯಾಗಿದೆ. ಬುಧವಾರ (ಜು.13) ಬೆಳಗ್ಗೆ ಶಾಲೆಯ ಹಾಸ್ಟೆಲ್ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. 'ನನ್ನ ಸಾವಿಗೆ ಶಿಕ್ಷಕರೇ ಕಾರಣ' ಎಂದು ಸಾವಿಗೂ ಮುನ್ನ ಆಕೆ ಬರೆದಿಟ್ಟಿದ್ದ ಡೆತ್ನೋಟ್ ಪತ್ತೆಯಾಗಿತ್ತು. ಅಂದಿನಿಂದ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಸಣ್ಣಮಟ್ಟದಲ್ಲೇ ಪ್ರತಿಭಟನೆ ನಡೆಯುತ್ತಲೇ ಇತ್ತು.
ಭಾನುವಾರ ಆಕ್ರೋಶಗೊಂಡ ವಿವಿಧ ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಶಾಲೆಗೆ ಏಕಾಏಕಿ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ನೋಡನೋಡುತ್ತಿದ್ದಂತೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ವಿದ್ಯಾ ಸಂಸ್ಥೆಯ ಬಸ್ಗಳು ಮತ್ತು ಆವರಣದ ಬಳಿ ನಿಲ್ಲಿಸಲಾಗಿದ್ದ ಪೊಲೀಸ್ ಬಸ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು ತೂರಾಟ ನಡೆಸಿದ್ದು, ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ವಿಲ್ಲುಪುರಂ ರೇಂಜ್) ಎಂ.ಪಾಂಡಿಯನ್ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯ ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ವಿದ್ಯಾರ್ಥಿನಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮೃತರ ಕುಟುಂಬಕ್ಕೆ ಎಂದು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಶಾಂತತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಜು. 17 ರಿಂದ 30ರವರೆಗೆ ಕಲ್ಲಕುರಿಚಿ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.