ಬಿಡದಿ: 'ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ, ಸ್ವಿಮ್ಮಿಂಗ್ ಪೂಲ್ ಮಾಡಿ ಹೋಗಿದ್ದಾರೆ. ಇದೇನಾ ಸಂಸದ ಪ್ರತಾಪ್ ಸಿಂಹ ಅವರ ಚೆಂದದ ರಸ್ತೆ? ಸ್ವಿಮ್ ಮಾಡೋಕೆ ಅವರೇ ಹೈವೆಗೆ ಬಂದಿದ್ರೆ ಚೆನ್ನಾಗಿರೋದು... ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗವಾಡಿದ್ದಾರೆ.
ಇಟ್ಟಮಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ಹೈವೆ ಕೆಲಸ ಉತ್ತಮವಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು. ಉತ್ತಮವಾದ ಕೆಲಸ ಏನಾಗಿದೆ ಎಂದು ಬಂದು ನೋಡೋದಕ್ಕೆ ಅವರಿಗೇ ಹೇಳಿ, ಅವರೇ ನಿಂತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ರಲ್ಲ, ಅವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೋ ತೆಗೆಸಿಕೊಂಡಿದ್ರು. ಅಧಿಕಾರಿಗಳ ಸಭೆ ಮಾಡಿದ್ರು, ಮಧ್ಯಸ್ಥಿಕೆ ವಹಿಸಿದ್ರು. ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು. ಅವರೇ ಹೈವೆಗೆ ಬಂದಿದ್ರೆ ಸ್ವಿಮ್ಮಿಂಗ್ ಮಾಡಲಿಕ್ಕೆ ಚೆನ್ನಾಗಿ ನೀರು ನಿಂತಿತ್ತು ಎಂದು ಲೇವಡಿ ಮಾಡಿದರು.
ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಆಗಿದೆ. ಕಣ್ಣಿದ್ರೆ ಬಂದು ನೋಡೋದಕ್ಕೆ ಹೇಳಿ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು. ಕೆರೆ ಒಡೆದಿರೋದರಿಂದ ಈ ರೀತಿ ಆಗಿರೋದಲ್ಲ ಶಾಶ್ವತವಾದ ಕೆಲಸ ಆಗಬೇಕು. ಸರ್ಟಿಫಿಕೇಟ್ ಕೊಡೋದಿಕ್ಕಲ್ಲ ಸಂಸದರು ಇರೋದು. ತಪ್ಪಾಗಿದ್ರೆ ಸರಿಪಡಿಸಬೇಕು, ಕೆರೆ ಒಡೆದೋಯ್ತು ಅಂತ ಹೇಳೋದಕ್ಕಲ್ಲ... ಪ್ರತಾಪ್ ಸಿಂಹ ಪ್ರಚಾರ ತಗೊಳೋದನ್ನು ನಿಲ್ಲಿಸಿ ಜನಪರ ಕೆಲಸ ಮಾಡಲಿ ಎಂದು ಎಚ್‌ಡಿಕೆ ಸಲಹೆ ನೀಡಿದರು.