ಜಿಲ್ಲೆ

ನೀವು ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು: ಡಿಕೆಶಿಗೆ ಎಚ್​ಡಿಕೆ ತಿರುಗೇಟು

arunakunigal

ಮೈಸೂರು: ನೀವೇ ಮಣ್ಣಿನ ಮಕ್ಕಳು ಎಂದು ಬೋರ್ಡ್ ಹಾಕೊಂಡು ಓಡಾಡಿ. ನಿಮ್ಮನ್ನು ಬೇಡ ಎಂದು ತಡೆಯುವವರು ಯಾರಿದ್ದಾರೆ? ನೀವು ಮಣ್ಣಿನ ಮಕ್ಕಳಲ್ಲ ಕಲ್ಲಿನ ಮಕ್ಕಳು. ಕನಕಪುರ ಭಾಗದಲ್ಲಿ ನಿಮ್ಮನ್ನು ಮಣ್ಣಿನ ಮಕ್ಕಳು ಎಂದು ಕರೆಯೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಎಚ್​ಡಿಕೆ, ಕನಕಪುರ ಭಾಗದಲ್ಲಿ ನಿಮ್ಮನ್ನು ಮಣ್ಣಿನ ಮಕ್ಕಳು ಎಂದು ಕರೆಯೋದಿಲ್ಲ. ಕಲ್ಲಿನ ಮಕ್ಕಳು ಎನ್ನುತ್ತಾರೆ ಎಂದು ಡಿಕೆಶಿಗೆ ತಿರುಗೇಟು ಕೊಟ್ಟರು. ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದ್ರೆ ಡಿಕೆಶಿ ಕುತ್ತಿಗೆಗೆ ಬರುತ್ತೆ. ಡಿಕೆಶಿ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ. ಯಾರನ್ನಾದರೂ ಸೆಳೆಯಲಿ, ನಾವು ತಲೆ‌ಕೆಡಿಸಿಕೊಳ್ಳಲ್ಲ‌. ದೇವೇಗೌಡರು ಇರೋವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ ಎಂದರು.

ಈ ಸಂಬಂಧ ನಾನು ಯಾವುದೇ ರಿವರ್ಸ್ ಆಪರೇಷನ್ ಮಾಡಲ್ಲ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಬೆಳವಣಿಗೆ ನೋಡಿ ಆ ಪಕ್ಷದವರೇ ನಮ್ಮತ್ತ ಬರ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.