ಜಿಲ್ಲೆ

ಟೆಕ್ಕಿ ಮನೆಯಲ್ಲಿ 20 ಲಕ್ಷ ಮೌಲ್ಯದ ಚಿನ್ನ ಕದ್ದು ಅಡಗಿದ್ದ ಕಳ್ಳ... ಪತ್ನಿ ಮೇಲಿನ ಪ್ರೀತಿಗೆ ವಾಪಸ್​ ಬಂದು ಪೊಲೀಸರಿಗೆ ಶರಣಾದ

ಬೆಂಗಳೂರು: ಸಾಫ್ಟ್​ವೇರ್​ ಇಂಜಿನಿಯರ್​ ಮನೆಯಲ್ಲಿ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ನೇಪಾಳ ಸೇರಿದ್ದ ಸೆಕ್ಯೂರಿಟಿ ಗಾರ್ಡ್​, ಪತ್ನಿ ಮೇಲಿನ ಪ್ರೀತಿಗೆ ವಾಪಸ್​ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.

ನೇಪಾಳ ಮೂಲದ ಸುರೇಂದ್ರ ಗೂರ್ಖಾ ಅಲಿಯಾಸ್​ ಗಣೇಶ್​ ಕಡ್ಕ ಬಂಧಿತ. ಈತನಿಂದ 450 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಸುರೇಂದ್ರ, ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮದುವೆಯಾಗಿ ಪತ್ನಿಯೊಂದಿಗೆ ಪ್ರಶಾಂತ್​ನಗರದಲ್ಲಿ ನೆಲೆಸಿದ್ದ. ಕೆಲ ದಿನಗಳ ಹಿಂದೆ ಚಂದ್ರಾಲೇಔಟ್​ನಲ್ಲಿರುವ ಸಾಫ್ಟ್​ವೇರ್​ ಕಂಪನಿಯ ಉದ್ಯೋಗಿಯೊಬ್ಬರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದ. ಆನಂತರ ಪತ್ನಿಯನ್ನು ಬಿಟ್ಟು ನೇಪಾಳಕ್ಕೆ ಹೋಗಿ ಅಡಗಿದ್ದ. ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದ ಸಾಫ್ಟ್​ವೇರ್​ ಉದ್ಯೋಗಿ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಟೆಕ್ಕಿ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್​ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿ ಬಂದಿದ್ದ ಬೈಕ್​ನ​ ಚಿತ್ರ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಮನೆ ವಿಳಾಸ ಲಭ್ಯವಾಗಿತ್ತು. ಆದರೆ, ಅಷ್ಟರಲ್ಲಿ ಪತ್ನಿಯನ್ನು ಬಿಟ್ಟು ಕಾವಲುಗಾರ ನೇಪಾಳ ಸೇರಿದ್ದ. ವಿಚಾರಣೆ ಸಲುವಾಗಿ ಆರೋಪಿಯ ಪತ್ನಿಯನ್ನು ವಶಕ್ಕೆ ಪಡೆದಿದ್ದರು. ವಿಷಯ ತಿಳಿದ ಸೆಕ್ಯೂರಿಟಿ ಗಾರ್ಡ್​, ಪತ್ನಿ ಮೇಲಿನ ಪ್ರೀತಿಗೆ ವಾಪಸ್​ ಬೆಂಗಳೂರಿಗೆ ಬಂದು ಚಂದ್ರಾಲೇಔಟ್​ ಪೊಲೀಸರಿಗೆ ಶರಣಾಗಿ ಕದ್ದ ಚಿನ್ನಾಭರಣ ವಾಪಸ್​ ಒಪ್ಪಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.