ಮೈಸೂರು: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ ವೇಳೆ ದುರಂತ ಸಂಭವಿಸಿದ್ದು, ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ನಂಜುಂಡ(37) ಮೃತ ದುರ್ದೈವಿ. ಹದಿನಾರು ಗ್ರಾಮದಲ್ಲಿ ಭಾನುವಾರ ಸಂಜೆ 6 ಗಂಟೆಯಲ್ಲಿ ಐದಾರು ಜನರಿದ್ದ ಗುಂಪು ಇಸ್ಪೀಟ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬಂದ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ಜೂಜುಕೋರರು ದಿಕ್ಕಾಪಾಲಾಗಿ ಓಡಿದರು. ಈ ಪೈಕಿ ನಂಜುಂಡ ಎಂಬಾತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹದಿನಾರು ಕೆರೆಗೆ ಜಿಗಿದಿದ್ದ.
ಈಜಲು ಬಾರದ ನಂಜುಂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆತನಿಗಾಗಿ ಭಾನುವಾರ ಸಂಜೆಯಿಂದ ನಂಜನಗೂಡು ಗ್ರಾಮಾಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಕೊನೆಗೂ ನಂಜುಂಡ ಶವ ಪತ್ತೆಯಾಗಿದೆ.