ಜಿಲ್ಲೆ

ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಮರಕ್ಕೆ ಡುಕಾಟಿ ಬೈಕ್ ಡಿಕ್ಕಿ: ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ-ಗೆಳತಿ ದುರ್ಮರಣ

ಆನೇಕಲ್: ಸರ್ಜಾಪುರ-ಬೆಂಗಳೂರು ಮುಖ್ಯರಸ್ತೆಯಲ್ಲಿ ಮರಕ್ಕೆ ಡುಕಾಟಿ ಬೈಕ್​ ಡಿಕ್ಕಿ ಹೊಡೆದು ನಿವೃತ್ತ ಪೊಲೀಸ್​ ಅಧಿಕಾರಿ ಗುರುಪ್ರಸಾದ್​ ಅವರ ಮಗ ಮತ್ತು ಈತನ ಗೆಳತಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಬೆಂಗಳೂರಿನ ಮಾರತಹಳ್ಳಿ ಮೂಲದ ಗಗನ್ ದೀಪ್ ಗಗನ್ ಮತ್ತು ಬನಶಂಕರಿಯ ಯಶಸ್ವಿನಿ ಮೃತ ದುರ್ದೈವಿಗಳು. ಸರ್ಜಾಪುರದ ಪ್ರೆಸ್ಟೀಜ್ ಕಂಪನಿಯಲ್ಲಿ ಇವರಿಬ್ಬರೂ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಿಂದ ಸರ್ಜಾಪುರಕ್ಕೆ ಬೈಕ್​ನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಶುಕ್ರವಾರ ಬೆಳಗಿನ ಜಾವ 3ರ ಸಮಯದಲ್ಲಿ ರಸ್ತೆಬದಿಯ ಮರಕ್ಕೆ ಬೈಕ್​ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಗಗನ್​ದೀಪ್​ರ ಮುಖ ನಜ್ಜುಗುಜ್ಜಾಗಿದೆ. ಇಬ್ಬರ ಮೃತದೇಹಗಳನ್ನು ಆಕ್ಸ್​ಫರ್ಡ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.