ಜಿಲ್ಲೆ

ಕರೊನಾ ಪಾಸಿಟಿವ್​ ಬಂದರೂ ಮದ್ವೆ ಮನೆಗೆ ಬಂದ ವಕೀಲ! ಪ್ರಶ್ನಿಸಿದ್ದಕ್ಕೆ ಉಡಾಫೆ, ಮುಂದೆ ಆಗಿದ್ದೆಲ್ಲವೂ ಅವಾಂತರ

arunakunigal

ಮಂಗಳೂರು: ಕರೊನಾ ಪಾಸಿಟಿವ್ ಬಂದರೂ ಮದುವೆ ಕಾರ್ಯಕ್ರಮಕ್ಕೆ ಹಾಜರಾದ ವಕೀಲನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಾಣಿನಾಲ್ಕೂರು ಗ್ರಾಮದ ರಾಜೇಶ್ ಪೂಜಾರಿ ಎಂಬುವರು ಮೇ 10ರಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೊನಾ ಟೆಸ್ಟ್​ ಮಾಡಿಸಿದ್ದು, ಸೋಂಕು ದೃಢಪಟ್ಟಿತ್ತು. ಹಾಗಾಗಿ ಮೇ 11ರಂದು ರಾಜೇಶ್ ಮನೆಗೆ ತೆರಳಿದ ಆಶಾ ಕಾರ್ಯಕರ್ತೆಯರು ಕ್ವಾರಂಟೈನ್​ ಆಗುವಂತೆ ಸೂಚಿಸಿದ್ದರು. ಮೇ 13ರಂದು ಮತ್ತೆ ಅವರ ಮನೆಗೆ ಗ್ರಾಪಂ ಸಿಬ್ಬಂದಿ ತೆರಳಿದಾಗ ರಾಜೇಶ್ ಅಲ್ಲಿರಲಿಲ್ಲ. ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ರಾಜೇಶ್​ ಕಾರ್ಕಳದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿರುವ ವಿಚಾರ ಗೊತ್ತಾಗಿದೆ.

ಕೂಡಲೇ ರಾಜೇಶ್​ಗೆ ಕರೆ ಮಾಡಿ ಮಾತನಾಡಿದಾಗ, ತಾನು ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ಟೆಸ್ಟ್ ಮಾಡಿಸಿದೆ. ವರದಿ ನೆಗೆಟಿವ್​ ಬಂದಿದೆ. ಮತ್ತೇಕೆ ಕ್ವಾರಂಟೈನ್​ ಆಗಬೇಕು ಎಂದು ರಾಜೇಶ್​ ಉಡಾಫೆಯಿಂದ ವರ್ತಿಸಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿ ಪಿಡಿಒ ವಸಂತಿ ಅವರು ರಾಜೇಶ್​ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ‌ಪ್ರಕರಣ ದಾಖಲಿಸಿದ್ದಾರೆ.

ಒಮ್ಮೆ ಕರೊನಾ ಪಾಸಿಟಿವ್​ ಎಂದು ಬಂದರೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಆ ವ್ಯಕ್ತಿ 14 ದಿನ, ಪ್ರಾಥಮಿಕ ಸಂಪರ್ಕದಲ್ಲಿದ್ದವರು 7 ದಿನ ಕ್ವಾರಂಟೈನ್​ ಆಗಬೇಕಿದೆ. ಆದರೆ ರಾಜೇಶ್​ ಕೋವಿಡ್​ ನಿಯಮ ಉಲ್ಲಂಘಿಸಿ ಮದುವೆಗೆ ಹೋಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.