ಬಳ್ಳಾರಿ: ಕರೊನಾ ಸೋಂಕಿಗೆ ಬಲಿಯಾದ ಶಿಕ್ಷಕರೊಬ್ಬರ ಅಂತ್ಯಸಂಸ್ಕಾರವನ್ನ ವಿದ್ಯಾರ್ಥಿಗಳೇ ನೆರವೇರಿಸಿದ್ದು, ಆ ಮೂಲಕ ಸಾವಿನಲ್ಲೂ ಗುರುಭಕ್ತಿ ತೋರಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಿರುಗುಪ್ಪ ಪಟ್ಟಣದ ವಿನಾಯಕ ನಗರ ನಿವಾಸಿ ನಿವೃತ್ತ ಶಿಕ್ಷಕ ವೈ.ಈಶ್ವರಪ್ಪ(63) ಮೃತರು. ಕಳೆದ ವಾರ ಕರೊನಾ ಸೋಂಕು ತಗುಲಿದ್ದ ಈಶ್ವರಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು.
ಚಿಕಿತ್ಸೆ ಫಲಿಸದೆ ಶನಿವಾರ (ಮೇ 15) ಈಶ್ವರಪ್ಪ ಕೊನೆಯುಸಿರೆಳೆದಿದ್ದರು. ಈ ವೇಳೆ ಹಳೇ ವಿದ್ಯಾರ್ಥಿಗಳು ಪಿಪಿಇ ಕಿಟ್ ಧರಿಸಿ ಶಿಕ್ಷಕನ ಮೃತದೇಹ ತೆಗೆದುಕೊಂಡು ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ. ಮೃತರು ಸಿರುಗುಪ್ಪ ತಾಲೂಕಿನ ವಿವಿಧ ಹಳ್ಳಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಬಹಳಷ್ಟು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.