ಕಲಬುರಗಿ: ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬೇಕು ಅಂದ್ರೆ ಯುವತಿಯರು ಮಂಚ ಹತ್ತಬೇಕು. ಯುವಕರಿಗೆ ನೌಕರಿ ಬೇಕು ಅಂದ್ರೆ ಲಂಚ ಕೊಡಬೇಕು ಎಂಬಂತಹ ಕೆಟ್ಟ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಿದೆ. ರಾಜ್ಯದಲ್ಲಿ ಲಂಚ-ಮಂಚದ ಸರ್ಕಾರ ಕೆಲಸ ನಿರ್ವಹಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
75ನೇ ಸ್ವಾಂತತ್ರ್ಯೋತ್ಸವ ಹಿನ್ನೆಲೆ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ರಂಗನಾಥ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮೂರು ದಿನಗಳ ಹಿಂದೆ ಪಾಲ್ಗೊಂಡಿದ್ದ ಪ್ರಿಯಾಂಕ್ ಖರ್ಗೆ, ಸರ್ಕಾರಿ ಉದ್ಯೋಗ ಬೇಕು ಅಂದ್ರೆ ಮಂಚ ಹತ್ತಬೇಕು, ಇಲ್ಲವೇ ಲಂಚ ಕೊಡಬೇಕು. ಅಂತಹ ಕೆಟ್ಟ ಪರಿಸ್ಥಿತಿಯನ್ನ ಬಿಜೆಪಿ ಸರ್ಕಾರ ಸೃಷ್ಟಿಸಿದೆ ಎಂದು ಆಕ್ರೋಶ ಹೊರಹಾಕಿದ್ದರು. ಇದೇ ಮಾತನ್ನು ಇಂದು ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಪುನರುಚ್ಛರಿಸಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಈ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಸರ್ಕಾರಿ ಹುದ್ದೆ ಭರ್ತಿ ಮಾಡೋದಕ್ಕೆ ಮುಂದಾದಾಗ ಒಂದೊಂದೇ ಹಗರಣ ಹೊರ ಬರ್ತಿದೆ. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಪಾಸ್ ಆಗುವವರಿಗೂ ಸೂಕ್ತ ಕೆಸಲ ಸಿಗ್ತಿಲ್ಲ. ಹಣ ಕೊಟ್ಟರಷ್ಟೇ ಉದ್ಯೋಗ. ಈ ಸರ್ಕಾರದಲ್ಲಿ ಪ್ರತಿ ಹುದ್ದೆಯೂ ಮಾರಾಟಕ್ಕಿದೆ. ಸಾಕಷ್ಟು ಮಂದಿ ತಮ್ಮ ಮಕ್ಕಳಿಗೆ ಉದ್ಯೋಗ ಸಿಗಲೆಂದು ಹೊಲ- ಮನೆ ಅಡವಿಟ್ಟಿದ್ದಾರೆ. ಅವರ ಕಷ್ಟ ಕೇಳೋರಿಲ್ಲ. ಬಡ ಮಕ್ಕಳಿಗೆ ಅನ್ಯಾಯ ಆಗ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು. ಎಸ್ಡಿಎ 1321 ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಲಾಗಿತ್ತು ಎಂದು ಸರ್ಕಾರಿ ಅಧಿಕಾರಿಗಳೇ ಹೇಳಿದ್ದಾರೆ ಎಂದು ಟೀಕಿಸಿದರು.
ಇನ್ನು ಪ್ರಿಯಾಂಕ್ ಖರ್ಗೆ ಹೇಳಿದ ಲಂಚ-ಮಂಚ ಎಂಬ ಮಾತನ್ನು ಎಸ್.ಆರ್.ವಿಶ್ವನಾಥ್ ತೀವ್ರವಾಗಿ ಖಂಡಿಸಿದ್ದಾರೆ. ನಾಲಗೆಯನ್ನು ಬಿಗಿಹಿಡಿದು ಮಾತನಾಡಬೇಕು ಎಂದು ತಾಕೀತು ಮಾಡಿದ್ದಾರೆ.