ಮಂಡ್ಯ: ಕೆ.ಎಂ.ದೊಡ್ಡಿಯಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಡೆದಿದ್ದು ಕಾಂಗ್ರೆಸ್ ಕಾರ್ಯಕರ್ತನಿಗಲ್ಲ, ಜೆಡಿಎಸ್ ಕಾರ್ಯಕರ್ತನಿಗೆ!
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಜಿ.ಮಾದೇಗೌಡರನ್ನು ನೋಡಲೆಂದು ಡಿಕೆಶಿ ನಿನ್ನೆ ಕೆಎಂ ದೊಡ್ಡಿಗೆ ಬಂದಿದ್ದರು. ಈ ವೇಳೆ ಮದ್ದೂರು ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದ ಉಮೇಶ್ ತಲೆಗೆ ಪಟಾರ್ ಎಂದು ಡಿಕೆಶಿ ಹೊಡೆದದ್ದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಬಗ್ಗೆ ಉಮೇಶ್ ಪ್ರತಿಕ್ರಿಯಿಸಿದ್ದು, ಡಿಕೆಶಿ ಅವರನ್ನು ನೋಡಿದಾಗ ಅಭಿಮಾನ-ಪ್ರೀತಿ ಹೆಚ್ಚಾಗಿತ್ತು. ಒಕ್ಕಲಿಗ ನಾಯಕ ಬರುತ್ತಿದ್ದಾರೆ ಎಂದು ಪಕ್ಷ ಮರೆತು ಅಲ್ಲಿಗೆ ಹೋಗಿದ್ದೆ. ಈ ವೇಳೆ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಕೈಯನ್ನು ಹಿಂದೆ ಹಿಡಲು ಹೋದೆ. ಅಷ್ಟಕ್ಕೆ ನನ್ನ ಮೇಲೆ ಕೈ ಮಾಡಿದ್ರು. ಅವರು ಕೈ ಮಾಡಿದ್ದು ಸರಿಯಲ್ಲ. ಹೆಗಲ ಮೇಲೆ ಕೈ ಹಾಕುವಂತಹ ಸಣ್ಣ ಮನುಷ್ಯ ನಾನಲ್ಲ. ನಾನು ಕೂಡ ಪ್ರಜ್ಞೆ ಇರುವ ವ್ಯಕ್ತಿ. ನಾನು ಜೆಡಿಎಸ್‌ನ ಕಾರ್ಯಕರ್ತ. ಡಿ.ಸಿ.ತಮಣ್ಣ ಅವರ ಪಕ್ಕ ಅಭಿಮಾನಿ. ಡಿ.ಕೆ.ಶಿವಕುಮಾರ್ ನನ್ನ ಸಂಬಂಧಿ ಕೂಡ ಆಗಬೇಕು. ನಮ್ಮ ಜನಾಂಗದ ನಾಯಕ ಎಂಬ ಅಭಿಮಾನಿಕ್ಕೆ ನಾನು ಹೋದೆ ಎಂದು ಡಿಕೆಶಿ ನಡೆಯನ್ನು ಖಂಡಿಸಿದ್ದಾರೆ.
ಬೇರೆ ವ್ಯಕ್ತಿ ನನ್ನ ಮೇಲೆ ಕೈ ಮಾಡಿದ್ರೆ ನಾನು ಅಲ್ಲೆ ಪ್ರತಿಭಟನೆ ಮಾಡುತ್ತಿದ್ದೆ. ಡಿಕೆಶಿ ಮೇಲಿನ ಸ್ಥಾನಮಾನಕ್ಕೆ ಬೆಲೆ ಕೊಟ್ಟು ಸುಮ್ಮನೆ ಇದ್ದೀನಿ. ಡಿಕೆಶಿ ಅವರ ವರ್ತನೆ ಸರಿ ಇಲ್ಲ. ಅವರ ಅಧ್ಯಕ್ಷಗಿರಿಗೆ ಇದು ಶೋಭೆ ತರುವುದಿಲ್ಲ. ಈ ವರ್ತನೆಯನ್ನು ಅವರು ಬಿಡಬೇಕು. ಅವರು ಗೂಂಡಾಗಿರಿನೋ ಏನೋ ನನಗೆ ಗೊತ್ತಿಲ್ಲ ಎಂದು ಉಮೇಶ್ ಹೇಳಿದರು.