ಬೆಂಗಳೂರು: ದಶಕಗಳ ನಿರಂತರ ಹೋರಾಟ, ಪ್ರಯತ್ನದ ಫಲವಾಗಿ ಬಯಸಿದ್ದು ದಕ್ಕಿದ ಸಂತಸದಲ್ಲಿರುವ ಪೌರ ಕಾರ್ಮಿಕರಿಗೆ ಶುಕ್ರವಾರ ಮತ್ತೊಂದು ಹೆಮ್ಮೆ, ಗೌರವದ ಅನುಭೂತಿ ಒಲಿಯಿತು.
ಪೌರ ಕಾರ್ಮಿಕರ ದಿನದ ನಿಮಿತ್ತ ಶುಕ್ರವಾರ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ನಲ್ಲಿ ಪೌರ ಕಾರ್ಮಿಕರ ಸಡಗರ, ಸಂಭ್ರಮ ಮನೆ ಮಾಡಿತ್ತು. ಬೆಳಗಿನ ಕೆಲಸದ ನಡುವೆ ಸಮವಸ್ತ್ರದಲ್ಲೇ ಕುಳಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉಪಾಹಾರ ಸೇವಿಸಿದರು.
ಇಡ್ಲಿ, ವಡಾ, ಸಾಂಬಾರು, ಚಟ್ನಿ, ಉಪ್ಪಿಟ್ಟು, ಕೇಸರಿ ಬಾತ್ ಸೇವಿಸಿ ಹೊಟ್ಟೆ ತುಂಬಿಸಿಕೊಂಡರು. ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರೆಂಬ ಹೆಗ್ಗಳಿಕೆಗೆ ತಕ್ಕ ಸಮ್ಮಾನ ದೊರೆತಿದೆ. ಅದಕ್ಕಿಂತಲೂ ಮುಖ್ಯವಾಗಿ ನೆಮ್ಮದಿ ಬದುಕು, ಕುಟುಂಬಕ್ಕೆ ಭದ್ರತೆಯನ್ನು ನಮ್ಮ ಮುಖ್ಯಮಂತ್ರಿ ಕಲ್ಪಿಸಿಕೊಟ್ಟಿದ್ದಾರೆ ಎಂದು ಪೌರ ಕಾರ್ಮಿಕರು ಸಂತಸ ಹಂಚಿಕೊಂಡರು.
ಎರಡು ಕಂತುಗಳಲ್ಲಿ ಉಳಿದವರು ಕಾಯಂ: ಪೌರ ಕಾರ್ಮಿಕರ ಜತೆಗೆ ಉಪಾಹಾರದ ನಂತರ ಸಿಎಂ ಬೊಮ್ಮಾಯಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ರಾಜ್ಯದ ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರತ 43 ಸಾವಿರ ಪೌರ ಕಾರ್ಮಿಕರ ಪೈಕಿ ಮೊದಲ ಹಂತದಲ್ಲಿ 11,137 ಜನರ ಸೇವೆ ಕಾಯಂ ಮಾಡಿದ್ದೇವೆ. ಇನ್ನೆರಡು ಕಂತುಗಳಲ್ಲಿ ಉಳಿದವರ ಸೇವೆ ಕಾಯಂ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ಸೇವೆ ಕಾಯಂಗೊಳಿಸಲು ಸಚಿವ ಸಂಪುಟ ನಿರ್ಧಾರ ತಿಳಿದು, ಪೌರ ಕಾರ್ಮಿಕರ ಸಂಘದ ಪ್ರತಿನಿಧಿಗಳು ಭೇಟಿ ಮಾಡಿ ಧನ್ಯವಾದ ಹೇಳಲು ಬಂದ ದಿನವೇ ಇಂದಿನ ಉಪಾಹಾರಕ್ಕೆ ಆಹ್ವಾನ ನೀಡಿದ್ದೆ ಎಂದು ತಿಳಿಸಿದರು.
ದೀರ್ಘಾವಧಿಯ ಸೇವೆ, ಕಠಿಣ ಪರಿಶ್ರಮ ಪುರಸ್ಕರಿಸಲಾಗಿದೆ ಎಂಬ ಸಂತೋಷ ಅವರಲ್ಲಿ ಮನೆ ಮಾಡಿದೆ. ಅತ್ಯಂತ ಕೆಳಮಟ್ಟದಲ್ಲಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುವುದು ಮಾನವೀಯತೆ ಮಾತ್ರವಲ್ಲ, ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.