ಜಿಲ್ಲೆ

ಬೆಳಗಾವಿಯಲ್ಲಿ ಕಾರು-ಲಾರಿ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ

ಚಿಕ್ಕೋಡಿ: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರೆಲ್ಲರೂ ನಿಪ್ಪಾಣಿ ನಗರದವರು. ಇವರೆಲ್ಲರೂ ಸಂಬಂಧಿಕರ ಮದುವೆಗೆ ಹೋಗುತ್ತಿದ್ದರು.

ಅದಗೊಂಡ ಪಾಟೀಲ್​ ಮತ್ತು ಛಾಯಾ ಪಾಟೀಲ್ ದಂಪತಿ, ಇವರ ಮಗ ಮಹೇಶ್ ಪಾಟೀಲ್, ಅದಗೊಂಡ ಪಾಟೀಲ್​ರ ತಾಯಿ ಚಾಪ್ಪಾತಾಯಿ ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು.

5 ದಿನದ ಹಿಂದೆ ಧಾರವಾಡದಲ್ಲಿ ಮದುವೆ ದಿಬ್ಬಣದ ವಾಹನ ಅಪಘಾತಕ್ಕೀಡಾಗಿ ಒಂದೇ ದಿನ 8 ಮಂದಿ ಮೃತಪಟ್ಟಿದ್ದರು. ಇದೇ ಪ್ರಕರಣದಲ್ಲಿ ಸಾವಿನ ಸಂಖ್ಯೆ 12ಕ್ಕೇರಿದ್ದು, ಕುಟುಂಬಸ್ಥರ ಆಕ್ರಂದನ ನೋಡಲಾಗ್ತಿಲ್ಲ. ಈ ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.