ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸೇವೆ ಮತ್ತು ಆರ್ಥಿಕ ಸದೃಢತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಮಂತ್ರ. ಆ ಮೂಲಕ ಪ್ರತಿ ಕುಟುಂಬದಲ್ಲಿ ಆರ್ಥಿಕ ಸುಸ್ಥಿರತೆ ತರುವ ಸಂಕಲ್ಪದೊಂದಿಗೆ ಹಣಕಾಸು ಸಂಸ್ಥೆಯೊಂದಿಗಿನ ಸಂಪರ್ಕಸೇತುವಾಗಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಹೇಳಿದರು.
ಪಡಂಗಡಿಯಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗುರುವಾಯನಕರೆ ವ್ಯಾಪ್ತಿಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕುಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, 800 ವರ್ಷಗಳ ದೈವಿಕ ಇತಿಹಾಸ ಇರುವ ಕುಡುಮಪುರ ಧರ್ಮಸ್ಥಳದಲ್ಲಿ 21ನೇ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪರಿವರ್ತನೆಯ ಮಹಾಅಭಿಯಾನ ನಡೆಯುತ್ತಿದ್ದು ಇದು ಸಶಕ್ತ ಸಮಾಜದ ಧ್ಯೇಯ ಮಾತ್ರ ಹೊಂದಿದೆ ಎಂದರು.
ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ವೇಣೂರು ವಲಯ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಮೋಹನ ಅಂಡಿಂಜೆ, ಎಸ್.ಕೆ.ಡಿ.ಆರ್.ಡಿ.ಪಿ, ಎಂ.ಐ.ಎಸ್. ಯೋಜನಾಧಿಕಾರಿ ಪ್ರೇಮನಾಥ, ಒಕ್ಕೂಟದ ವಲಯಾಧ್ಯಕ್ಷ ಮೋಹನ್ ಆಚಾರ್ಯ ಪಡಂಗಡಿ, ರಾಜಶೇಖರ್ ತಣ್ಣಿರುಪಂಥ, ಗಿರೀಶ್ ವೇಣೂರು, ಶೇಖರ್ ಹೆಗ್ಡೆ ನಾರಾವಿ, ಜಯ ಪೂಜಾರಿ ಮಡಂತ್ಯಾರು ಉಪಸ್ಥಿತರಿದ್ದರು.
ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಣಿಯೂರು ವಲಯ ಮೇಲ್ವಿಚಾರಕ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಮಡಂತ್ಯಾರು ವಲಯ ಮೇಲ್ವಿಚಾರಕ ವಸಂತ್ ಕುಮಾರ್ ವಂದಿಸಿದರು. ಸಮಾವೇಶದಲ್ಲಿ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರು ಭಾಗವಹಿಸಿದ್ದರು.
ಬೆಳ್ತಂಗಡಿ ಎಸ್.ಬಿ.ಐ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪದ್ಮನಾಭ ನಾಯಕ್ ಬ್ಯಾಂಕ್ ವ್ಯವಹಾರ, ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜನರ ಮಧ್ಯೆ ಸಂಪರ್ಕ ಸೇತುವಾಗಿ ಮಾಡುತ್ತಿರುವ ಸೇವೆ, ಆರ್ಥಿಕ ವ್ಯವಹಾರದ ಮೂಲಕ ಸಿಬಿಲ್ ಭದ್ರತೆ ಇತ್ಯಾದಿ ಬಗ್ಗೆ ಮತ್ತು ಧರ್ಮಸ್ಥಳ ಕೇಂದ್ರ ಕಚೇರಿ ನಿರ್ದೇಶಕ ಪ್ರವೀಣ್ ಎಂ.ಸಿ, ಕರಾವಳಿ ಭಾಗದ ಸ್ವಾತಂತ್ರೃ ಪೂರ್ವದ ಬ್ಯಾಂಕಿಂಗ್ ವ್ಯವಸ್ಥೆ, ಸಂಘಟಿತ ಆರ್ಥಿಕ ಅಭಿವೃದ್ಧಿಗಾಗಿ ಇರುವ ಬಿ.ಸಿ ವ್ಯವಸ್ಥೆ, ನಬಾರ್ಡ್ ಮತ್ತು ಸಿಡಿಬಿ ಯೋಜನೆಗಳು, ಸ್ವಸಹಾಯ ಸಂಘಗಳು ಅನುಸರಿಸಬೇಕಾದ ಪಂಚಸೂತ್ರಗಳ ಬಗ್ಗೆ ಉಪನ್ಯಾಸ ನೀಡಿದರು.
ಗುರುವಾಯನಕೆರೆ ವ್ಯಾಪ್ತಿಯಲ್ಲಿ ಒಟ್ಟು 1832 ಪ್ರಗತಿಬಂಧು ಸ್ವಸಹಾಯ ಸಂಘಗಳು, 3265 ಗುಂಪುಗಳು, 24700 ಮಂದಿ ಸದಸ್ಯರು 94 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಜ್ಞಾನ ವೃದ್ಧಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ದೇಶದ ಪ್ರಗತಿಯ ಭಾಗವಾಗಿ ಸದಸ್ಯರು ಗುರುತಿಸಿಕೊಂಡಿದ್ದಾರೆ. ದಯಾನಂದ ಪೂಜಾರಿ, ಯೋಜನಾಧಿಕಾರಿ ಎಸ್ಕೆಡಿಆರ್ಡಿಪಿದಯಾನಂದ ಪೂಜಾರಿ, ಯೋಜನಾಧಿಕಾರಿ ಎಸ್‌ಕೆಡಿಆರ್‌ಡಿಪಿ