ಜಿಲ್ಲೆ

ಗ್ರಾಮಸ್ಥರಿಂದ ಪ್ರಶ್ನೆಗಳ ಸುರಿಮಳೆ: ಸುಬ್ರಹ್ಮಣ್ಯ ಗ್ರಾಮಸಭೆಯಲ್ಲಿ ಜನರ ಆಕ್ರೋಶ ಧರಣಿ, ಚಕಮಕಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಒಳಪಟ್ಟ ಸುಬ್ರಹ್ಮಣ್ಯ, ಯೆನೇಕಲ್ ಹಾಗೂ ಐನೆಕಿದು ಗ್ರಾಮಗಳ ಎರಡನೇ ಹಂತದ ಗ್ರಾಮಸಭೆ ಸುಬ್ರಹ್ಮಣ್ಯ ಗ್ರಾಪಂನ ಕುಮಾರಧಾರ ಸಭಾಂಗಣದಲ್ಲಿ ಗುರುವಾರ ಜರುಗಿತು. ಕಾರ್ಯದರ್ಶಿಯ ವರದಿಯ ನಂತರ ಗ್ರಾಮಸ್ಥರ ಪ್ರಶ್ನೆಗಳು ಸುರಿಮಳೆ ನಡೆಯಿತು. ಹಿಂದಿನ ಗ್ರಾಮಸಭೆಯಲ್ಲಿ ತೆಗೆದುಕೊಂಡ ಯಾವೊಂದು ನಿರ್ಣಯವೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿದರು.

ಪ್ರತಿರೋಧ:

ಗ್ರಾಮಸ್ಥರಾದ ಪವನ್ ಕುಮಾರ್ ಎಂ.ಡಿ., ಕಿಶೋರ್ ಅರಂಪಾಡಿ, ರವೀಂದ್ರ ಕುಮಾರ್ ರುದ್ರಪಾದ, ಕೃಷ್ಣಮೂರ್ತಿ ಭಟ್, ಶ್ರೀನಾಥ ಭಟ್, ಸತೀಶ್ ಕೂಜುಗೋಡು, ಮೋಹನದಾಸ ರೈ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ನೀವು ಗ್ರಾಮ ಸಭೆಯನ್ನು ಮಾಡುವ ಉದ್ದೇಶವಾದರೂ ಏನು, ಹಿಂದಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳು ಹಾಗೂ ಬೇಡಿಕೆಗಳು ಹಾಗೆ ಇದ್ದು ಯಾವೊಂದು ಕೆಲಸ ಕಾರ್ಯಗಳು ಈಡೇರಿಲ್ಲ ಎಂದು ತೀವ್ರವಾದ ಪ್ರತಿರೋಧ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಬೇಡಿಕೆಗಳು ಹಾಗೂ ಉಳಿದ ವಿಚಾರಗಳ ಬಗ್ಗೆ ಈಗಾಗಲೇ ಇಲಾಖೆಗಳಿಗೆ ಪತ್ರ ರವಾನಿಸಿದ್ದೇವೆ ಉತ್ತರ ಬರಬೇಕಷ್ಟೇ ಎಂದರು.

ಇಲಾಖಾ ಮಾಹಿತಿ

ಇಲಾಖಾವಾರು ಮಾಹಿತಿಗಳನ್ನು ನೀಡುವಲ್ಲಿ ಸಭೆಯನ್ನು ಮುಂದುವರಿಸಲಾಯಿತು. ಇಲಾಖೆಗಳಾದ ಪಶು ವೈದ್ಯಕೀಯ ಹಾಗೂ ಪಶುಪಾಲನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಆರೋಗ್ಯ ಇಲಾಖೆ, ಮುಂತಾದ ಇಲಾಖೆಯವರು ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಿದರು.

ನೋಡಲ್ ಅಧಿಕಾರಿಯಾಗಿ ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಮೋದ್ ಕುಮಾರ್ ಭಾಗವಹಿಸಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಕ್ಷಮೆಯಾಚನೆಗೆ ಪಟ್ಟು

ಗ್ರಾಮಸ್ಥರು ಹಿಂದಿನ ಸಭೆಯಲ್ಲಿ ಆದ ನಿರ್ಣಯಗಳನ್ನು ನಿಮಗೆ ಕಾರ್ಯಗತಗೊಳಿಸಲು ಆಗದಿದ್ದರೆ ಗ್ರಾಮಸಭೆಯನ್ನು ಮುಂದೂಡಿ ಎಂದಾಗ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರೊಬ್ಬರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು. ಬಳಿಕ ಸದಸ್ಯರು ಗ್ರಾಮಸ್ಥರಲ್ಲಿ ಕ್ಷಮೆ ಯಾಚಿಸಲೇಬೇಕು ಎಂದು ವೇದಿಕೆ ಮುಂಭಾಗ ಬಂದು ನೆಲದಲ್ಲಿ ಧರಣಿ ಕೂತರು. ಕ್ಷಮೆ ಯಾಚಿಸದಿದ್ದರೆ ಕದಲುವುದಿಲ್ಲವೆಂದು ಹಠ ಹಿಡಿದರು. ಕೊನೆಗೆ ಸದಸ್ಯರು ಕ್ಷಮೆ ಯಾಚಿಸಿದ ನಂತರ ಧರಣಿಯನ್ನು ಅಂತ್ಯಗೊಳಿಸಲಾಯಿತು.