ಹುಬ್ಬಳ್ಳಿ: ಸಹೋದರನ ಕೊಲೆ ಕೇಸ್ನಲ್ಲಿ 'ಛೋಟಾ ಬಾಂಬೆ' ಸಿನಿಮಾ ನಟಿ ಶನಾಯ ಕಾಟವೆಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್ ಕಂ ನಟಿ ಆಗಿರುವ ಶನಾಯ 2018ರಲ್ಲಿ ತೆಲುಗಿನ ‘ಇದಂ ಪ್ರೇಮಂ ಜೀವನಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಕನ್ನಡದ ‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಅಂಡರ್ ವಲ್ಡ್೯ ಕಥೆ ಒಳಗೊಂಡಿರುವ ‘ಛೋಟಾ ಬಾಂಬೆ’ ಚಿತ್ರದ ಎರಡನೇ ನಾಯಕಿಯಾಗಿ ಶನಾಯ ಬಣ್ಣ ಹಚ್ಚಿದ್ದರು.
ಏ.11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಅರ್ಧಂಬರ್ಧ ಸುಟ್ಟಿದ್ದ, ರುಂಡ-ಮುಂಡ-ಕೈಕಾಲು ಬೇರ್ಪಟ್ಟಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಶವ ನಟಿ ಶನಾಯಳ ಸಹೋದರ ರಾಕೇಶ ಕಾವೆಯದ್ದು ಎಂದು ತಿಳಿಯುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ನಟಿ ಮೇಲೆಯೇ ಅನುಮಾನ ಮೂಡಿತ್ತು. ಇದನ್ನೂ ಓದಿರಿ ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆತ್ಮಹತ್ಯೆ!
ಈ ಜಾಡನ್ನು ಹಿಡಿದು ಹೊರಟ ಪೊಲೀಸರು ನಟಿ ಶನಾಯ, ಈಕೆಯ ಪ್ರಿಯಕರ ನಿಯಾಜ್, ಸಹಚರರಾದ ಮಲ್ಲಿಕ್, ಫಿರೋಜ್, ಸೈಫುದ್ದೀನ್ನನ್ನು ಬಂಧಿಸಿದ್ದಾರೆ. ರೀಲ್ನಲ್ಲಿ ಹಿರೋಯಿನ್ ಆಗಿದ ಶನಾಯ ರಿಯಲ್ನಲ್ಲಿ ವಿಲನ್ ಆಗಿದ್ದೇಕೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಹೈಸ್ಕೂಲ್ನಲ್ಲೇ ಲವ್: ಪ್ರಮುಖ ಆರೋಪಿ ನಿಯಾಜ್ ಹಾಗೂ ಶನಾಯಳ ನಡುವೆ ಹೈಸ್ಕೂಲ್ನಲ್ಲೇ ಲವ್ ಶುರುವಾಗಿತ್ತು. ಅಂದಿನಿಂದಲೇ ಇವರಿಬ್ಬರ ಪ್ರೀತಿಗೆ ರಾಕೇಶ ವಿರೋಧ ವ್ಯಕ್ತಪಡಿಸಿದ್ದ. ವಿದ್ಯಾಭ್ಯಾಸದ ನಂತರ ಶನಾಯ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಿ ನಂತರ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದಳು. ನಂತರವೂ ಹುಬ್ಬಳ್ಳಿಗೆ ಬಂದಾಗ ನಿಯಾಜ್ ಜತೆಯಲ್ಲೇ ವಾಸ ಇರುತ್ತಿದ್ದಳು. ಇದೇ ವಿಚಾರವಾಗಿ ನಿಯಾಜ್ ಜತೆ ರಾಕೇಶ ಗಲಾಟೆ ಮಾಡಿದ್ದ. ಪ್ರೀತಿಗೆ ಅಡ್ಡಿ ಆಗುತ್ತಿದ್ದ ರಾಕೇಶನನ್ನ ಶನಾಯಳ ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.