

ಕೊಪ್ಪಳ: ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಷ್ಟಗಿ ಪಟ್ಟಣದಲ್ಲಿರುವ ತನ್ನ ನಿವಾಸದಲ್ಲಿ ರಾಜೇಶ್ವರಿ ನಿನ್ನೆ(ಗುರುವಾರ) ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮುನ್ನಾ ಗುರುವಾರ ಬೆಳಗ್ಗೆ ಕುಷ್ಟಗಿ ಪುರಸಭೆ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಮನೆಗೆ ವಾಪಸ್ ಆದವರು ನೇಣಿಗೆ ಕೊರಳೊಡ್ಡಿದ್ದಾರೆ.
ಕುಷ್ಟಗಿ ಪಟ್ಟಣದ 16ನೇ ವಾರ್ಡ್ನಿಂದ ಪಕ್ಷೇತರ ಸದಸ್ಯೆಯಾಗಿ ಚುನಾಯಿತರಾಗಿದ್ದ ರಾಜೇಶ್ವರಿ, ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ್ದರು. ಇವರ ಪತಿ ಬೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್ವರಿ ಮಾನಸಿಕ ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.