ಜಿಲ್ಲೆ

ಹಾಸನ ಬಳಿ ಭೀಕರ ರಸ್ತೆ ಅಪಘಾತ; ಮಗು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವು

ಹಾಸನ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದಲ್ಲಿರುವ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಮೃತರನ್ನು ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ ರಾಕೇಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತರೆಲ್ಲರೂ ಚಿಕ್ಕಬಳ್ಳಾಪುರ ಮೂಲದವರು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮಂಗಳೂರಿನಲ್ಲಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ ವಾಪಸ್​ ಊರಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನಸುಕಿನ ಜಾವ ಈಚನಹಳ್ಳಿ ಬಳಿ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕಾರಳ್ಳಿ ಗ್ರಾಮದ ನಾರಾಯಣಪ್ಪ, ಸುನಂದಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂದರಹಳ್ಳಿ ಗ್ರಾಮದ ನೇತ್ರಾ ಹಾಗೂ ರವಿಕುಮಾರ್ ದಂಪತಿ ಹಾಗೂ ಪುತ್ರ ಚೇತನ್ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.

ಪಾಶ್ವವಾಯುಗೆ ತುತ್ತಾಗಿದ್ದ ನಾರಾಯಣಪ್ಪ ಅವರಿಗೆ ಚಿಕಿತ್ಸೆ ಕೊಡಿಸಲೆಂದು KA-53-C. 1419 ನಂಬರ್​ನ ಇಟಿಯೋಸ್​ ಬಾಡಿಗೆ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗಿದ್ದರು. ಚಿಕಿತ್ಸೆ ಪಡೆದು ವಾಪಸ್ಸು ಬೆಂಗಳೂರಿನ ಕಡೆಗೆ ಬರುವಾಗ ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್​ಗೆ ಹಾರಿ ಕಂಟೇನರ್​ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.