ಜಿಲ್ಲೆ

ಬಿಲ್ಡರ್​ ಮನೆಯಲ್ಲಿ 57 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು: ತೋಟದ ಮನೆಗೆ ಹೋಗಿದ್ದ ಬಿಲ್ಡರ್​ ಮನೆಗೆ ನುಗ್ಗಿದ ಕಳ್ಳರು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಆರ್​ಟಿ ನಗರದಲ್ಲಿ ನಡೆದಿದೆ.

ಆರ್​ಟಿ ನಗರ ಬಿಲ್ಡರ್ ಬಿ.ಪಿ.ಶ್ರೀಧರ್​ ಮೂರ್ತಿ ಮನೆಯಲ್ಲಿ ಕಳ್ಳತನ ನಡೆದಿದೆ. ಏಪ್ರಿಲ್​ 29ರ ಬೆಳಗ್ಗೆ 6 ಗಂಟೆಗೆ ಶ್ರೀಧರ್​ ಕುಟುಂಬ ಸಮೇತರಾಗಿ ಚಿಕ್ಕಬಳ್ಳಾಪುರದ ತೋಟದ ಮನೆಗೆ ಹೋಗಿದ್ದರು. ಮನೆಯ ಸೆಕ್ಯೂರಿಟಿ ಗಾರ್ಡ್​ ಭರತ್​ ಎಂಬಾತ ಮೇ 3 ರಂದು ಕರೆ ಮಾಡಿ ಮನೆ ಮುಖ್ಯ ದ್ವಾರ ತೆಗೆದಿದೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯಲ್ಲಿ ಕಬೋರ್ಡ್​ ಓಪನ್​ ಆಗಿತ್ತು. ಅದರಲ್ಲಿದ್ದ 13.80 ಲಕ್ಷ ರೂ. ನಗದು, 2 ಕೆಜಿ ಬೆಳ್ಳಿ ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು.

ಈ ಕುರಿತು ಆರ್​.ಟಿ.ನಗರದ ದೂರು ನೀಡಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಂತೆ ದೂರಿನಲ್ಲಿ ಬಿಲ್ಡರ್​ ಶ್ರೀಧರ್​ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ದೇವರಜೀವನಹಳ್ಳಿ ಪೊಲೀಸರು ತಿಳಿಸಿದ್ದಾರೆ.