ಜಿಲ್ಲೆ

3 ವರ್ಷದಲ್ಲಿ 1950 ಬದಲಿ ನಿವೇಶನ ಹಂಚಿಕೆ; ಇನ್ನಷ್ಟು ಅಕ್ರಮ ತೆರೆದಿಟ್ಟ ತನಿಖೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಕೇವಲ ಮೂರು ವರ್ಷದ ಅವಧಿಯಲ್ಲಿ 50:50 ಅನುಪಾತದಡಿ ಒಟ್ಟು 1950 ನಿವೇಶನ ಹಂಚಿಕೆಯಾಗಿರುವುದು ತನಿಖೆಯಿಂದ ಬಯಲಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ತನಿಖೆ ಪೂರ್ಣಗೊಂಡ ಬಳಿಕ 5,000 ನಿವೇಶನಗಳ ಪೈಕಿ ಎಷ್ಟು ಬದಲಿಯಾಗಿ ಹಂಚಿಕೆಯಾಗಿವೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಮುಡಾ ಹಗರಣ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಕ್ರಮಗಳು ಬಯಲಿಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ಮುಡಾ ಆಯುಕ್ತರಾಗಿದ್ದ ಎಚ್.ಎಂ.ಕಾಂತರಾಜು, ಕಾರ್ಯದರ್ಶಿಯಾಗಿದ್ದ ಎಂ.ಕೆ.ಸವಿತಾ ನೇತೃತ್ವದ ತಂಡ ಮುಡಾ ವ್ಯಾಪ್ತಿಯ ಐದು ಸಾವಿರ ನಿವೇಶನ ಗುರುತಿಸಿ ಪಟ್ಟಿ ಮಾಡಿತ್ತು. ಈ ಪೈಕಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನವಾಗಿ 14 ನಿವೇಶನಗಳನ್ನು ವಿಜಯನಗರ 3ನೇ ಹಂತದಲ್ಲಿ ಹಂಚಿಕೆ ಮಾಡಲಾಗಿತ್ತು.

ಕೆಲವು ಪ್ರಭಾವಿಗಳು ಪ್ರಭಾವ ಬಳಸಿ ಸಾಕಷ್ಟು ನಿವೇಶನ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬರಲು ಪ್ರಾರಂಭವಾಗಿದೆ. ಅಲ್ಲದೆ, ರಾಜಕಾರಣಿಗಳು ತಮ್ಮ ಕುಟುಂಬದವರು ಹಾಗೂ ಸಂಬಂಧಿಕರಿಗೆ ನಿವೇಶನಗಳನ್ನು ಮಂಜೂರು ಮಾಡಿಸಿರುವುದು ಬಯಲಿಗೆ ಬರುತ್ತಿದೆ.

ರದ್ದಾದರೂ ಆತಂಕ ತಪ್ಪಿಲ್ಲ: 50:50 ಅನುಪಾತದಲ್ಲಿ ಹಂಚಿಕೆ ಆಗಿರುವ ಎಲ್ಲ ನಿವೇಶನಗಳನ್ನು ರದ್ದುಪಡಿಸಲು ಮುಡಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗೆಂದ ಮಾತ್ರಕ್ಕೆ ಅಕ್ರಮವಾಗಿ ನಿವೇಶನ ಪಡೆದವರು ತನಿಖೆಯಿಂದ ಬಚಾವಾಗಲು ಸಾಧ್ಯವಿಲ್ಲ. ಹೀಗಾಗಿ ತನಿಖೆಯ ಆತಂಕ ಪ್ರಾರಂಭವಾಗಿದೆ.

ಮನೆ ನಿರ್ವಣಕ್ಕೆ ಅವಕಾಶ ಕೊಡಬೇಡಿ: ಮುಡಾದಿಂದ ಅಕ್ರಮವಾಗಿ ಪಡೆದಿರುವ ನಿವೇಶನಗಳಲ್ಲಿ ಮನೆ ನಿರ್ವಣಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಅವರು ಜಿಲ್ಲಾಧಿಕಾರಿ ಹಾಗೂ ಮುಡಾ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಅಕ್ರಮವಾಗಿ ಪಡೆದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿ ನಂತರ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಯಥಾಸ್ಥಿತಿ ಕಾಯ್ದುಕೊಳ್ಳಲು ಕೆಲವರು ಆಲೋಚನೆ ಮಾಡುತ್ತಿದ್ದಾರೆ. ಇದಕ್ಕೆ ಮುಡಾ ಅವಕಾಶ ನೀಡಬಾರದು. 50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ಅಕ್ರಮ ನಿವೇಶನಗಳನ್ನು ಮುಡಾ ತಕ್ಷಣ ತನ್ನ ಸುಪರ್ದಿಗೆ ಪಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿ.ಎಸ್. ಶ್ರೀವತ್ಸ, 50:50ರ ಅನುಪಾತದಲ್ಲಿ ಪಡೆದಿರುವ ನಿವೇಶನದಲ್ಲಿ 200ಕ್ಕೂ ಹೆಚ್ಚು ಜನರು ಮನೆ ಕಟ್ಟುತ್ತಿರುವ ಕುರಿತು ಮಾಹಿತಿ ಇದೆ. ಅವರು ನ್ಯಾಯೋಚಿತವಾಗಿ ನಿವೇಶನ ಪಡೆದಿದ್ದರೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಆದರೆ, ಅಕ್ರಮವಾಗಿ ನಿವೇಶನ ಪಡೆದವರಿಗೆ ಮನೆ ನಿರ್ವಣಕ್ಕೆ ಅವಕಾಶ ನೀಡಬಾರದು. ಮುಡಾದಲ್ಲಿ ಸಾಕಷ್ಟು ಕಡತಗಳು ಕಾಣೆಯಾಗಿವೆ ಎಂದು ಸ್ವತಃ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯಾಂಶ ಬಯಲಿಗೆ ಬರಲಿದೆ.